ಪ್ರತಾಪಗಢ: ಫುಡ್ ಪಾಯ್ಸನಿಂಗ್ ನಿಂದ ಪ್ರತಾಪಗಢದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಒಂದೇ ಕುಟುಂಬದ 4 ಮಕ್ಕಳಲ್ಲಿ ಇಬ್ಬರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.
ಇನ್ನೂ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಘಂಟಾಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಟುಂಬದ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಎರಡೂ ಮಕ್ಕಳ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ್ದಾರೆ. ವೈದ್ಯಕೀಯ ಇಲಾಖೆಯಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.
ನಲಪಾಡಾ ಗ್ರಾಮ ಪಂಚಾಯಿತಿಯ ಮಾಂಡವ್ಜೆರ್ ಗ್ರಾಮದ ಒಂದೇ ಕುಟುಂಬದ 7 ಜನ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಘಂಟಾಳಿ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಘಂಟಾಳಿ ಪೊಲೀಸ್ ಠಾಣೆ ಪ್ರಭಾರಿ ಸೋಹನ್ ಲಾಲ್ ತಿಳಿಸಿದ್ದಾರೆ. ಮಾಹಿತಿ ಮೇರೆಗೆ ಪೊಲೀಸರು ಆಸ್ಪತ್ರೆಗೆ ಆಗಮಿಸಿದ್ದರು. ಭರ್ಕರಿ ಗ್ರಾಮದ ಲಾಲುರಾಮ್ ದಿಂಡೋರ್ ಅವರ ಪತ್ನಿ ಭೂರಿಬಾಯಿ ಮಾಡಿದ್ದ ಆಹಾರ ಸೇವಿಸಿದ ಬಳಿಕ ಕುಟುಂಬಸ್ಥರಲ್ಲಿ ವಾಂತಿ, ಬೇಧಿ, ವಾಕರಿಕೆ ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ನೆರವಿನಿಂದ 108 ಆ್ಯಂಬುಲೆನ್ಸ್ ಮೂಲಕ ಘಂಟಾಳಿ ಆಸ್ಪತ್ರೆಗೆ ಕರೆತರಲಾಯಿತು. ಇಲ್ಲಿಂದ ನಾಲ್ವರು ಮಕ್ಕಳ ಆರೋಗ್ಯ ಹದಗೆಟ್ಟಿದ್ದರಿಂದ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. 6 ವರ್ಷದ ಕೃಷ್ಣ ಮತ್ತು ಒಂದು ವರ್ಷದ ಲಲಿತಾ ಮೃತಪಟ್ಟಿದ್ದಾರೆ. ಮೋಹನ್ ಲಾಲ್ ಮತ್ತು ರಾಹುಲ್ ಗೆ ಚಿಕಿತ್ಸೆ ಮುಂದುವರೆದಿದೆ.
ಮಾಹಿತಿ ಮೇರೆಗೆ ವೈದ್ಯಕೀಯ ಇಲಾಖೆ ತಂಡ ಮಾಂಡವ್ಜೆರ್ ಗ್ರಾಮಕ್ಕೆ ತಲುಪಿತು. ತರಕಾರಿಗಳು ಮತ್ತು ಇತರ ಆಹಾರ ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.