ಸವಾಯಿ ಮಾಧೋಪುರ: ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಭಾನುವಾರ ಕಾರ್ ಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇಯಲ್ಲಿನ ಬನಾಸ್ ನದಿಯ ಸೇತುವೆ ಬಳಿ ಅಪಘಾತ ಸಂಭವಿಸಿದೆ.
ಪೊಲೀಸರ ಪ್ರಕಾರ, ಕುಟುಂಬವು ಪ್ರಾರ್ಥನೆ ಸಲ್ಲಿಸಲು ಸವಾಯಿ ಮಾಧೋಪುರದ ಗಣೇಶ ದೇವಸ್ಥಾನಕ್ಕೆ ಹೋಗುತ್ತಿತ್ತು. ಅಪರಿಚಿತ ವಾಹನವೊಂದು ಅವರ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಬೋನ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಧರಂಪಾಲ್ ಸಿಂಗ್ ಹೇಳಿದ್ದಾರೆ.
ಅಪಘಾತದಲ್ಲಿ ದುರಂತವಾಗಿ ಸಾವನ್ನಪ್ಪಿದವರಲ್ಲಿ ಮನೀಶ್ ಶರ್ಮಾ ಮತ್ತು ಅವರ ಪತ್ನಿ ಅನಿತಾ, ಕೈಲಾಶ್ ಶರ್ಮಾ ಮತ್ತು ಅವರ ಪತ್ನಿ ಸಂತೋಷ್ ಮತ್ತು ಸತೀಶ್ ಶರ್ಮಾ ಮತ್ತು ಅವರ ಪತ್ನಿ ಪೂನಂ ಸೇರಿದ್ದಾರೆ. ಗಾಯಗೊಂಡಿರುವ ಮಕ್ಕಳಾದ ಮನನ್ ಮತ್ತು ದೀಪಾಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ ಗೆ ಡಿಕ್ಕಿ ಹೊಡೆದ ವಾಹನದ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಕುಟುಂಬಸ್ಥರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು.