ತನ್ನ ಚಿಕ್ಕಪ್ಪ ಹಾಗೂ ಇತರೆ ಇಬ್ಬರಿಂದ ಅತ್ಯಾಚಾರಕ್ಕೊಳಗಾಗಿದ್ದ 12ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಶಾಲೆಯೊಂದು ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವ ಆಘಾತಕಾರಿ ಘಟನೆ ರಾಜಸ್ಥಾನದ ಅಜ್ಮೀರ್ ನಲ್ಲಿ ನಡೆದಿದೆ.
ಮೊದಲಿಗೆ ಈ ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾದರೆ ವಾತಾವರಣ ಹದಗೆಡುತ್ತದೆ ಎಂಬ ಸಬೂಬು ನೀಡಿ ಅವಕಾಶ ನಿರಾಕರಿಸಲಾಗಿತ್ತು ಎನ್ನಲಾಗಿದ್ದು, ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿನಿ ನಾಲ್ಕು ತಿಂಗಳುಗಳ ಕಾಲ ದೀರ್ಘಾವಧಿಗೆ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಪರೀಕ್ಷೆಗೆ ಅವಕಾಶ ನೀಡಿರಲಿಲ್ಲ ಎಂದು ಸಮರ್ಥಿಸಿಕೊಂಡಿದೆ.
ಇದೀಗ ವಿದ್ಯಾರ್ಥಿನಿ ಮಕ್ಕಳ ಸಹಾಯವಾಣಿಯನ್ನು ಸಂಪರ್ಕಿಸಿದ್ದು, ಈ ವಿಚಾರ ಈಗ ಮಕ್ಕಳ ಕಲ್ಯಾಣ ಸಮಿತಿಯ ಮುಖ್ಯಸ್ಥೆ ಅಂಜಲಿ ಶರ್ಮಾ ಅವರಿಗೂ ತಲುಪಿದೆ. ಬಾಲಕಿಯ ಅಳಲನ್ನು ಆಲಿಸಿರುವ ಅಂಜಲಿ ಶರ್ಮಾ, ಆಕೆಗೆ ನ್ಯಾಯ ದೊರಕಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.