1977ರಲ್ಲಿ ಅಡುಗೆ ಕೆಲಸಕ್ಕೆ ಕಟ್ಟಿಗೆ ಕಡಿಯಲೆಂದು ಕಾಡಿಗೆ ತೆರಳಿದ್ದ ಮಹಿಳೆಯರು 2023ರಲ್ಲಿ ಅಂದರೆ ಬರೋಬ್ಬರಿ ಐದು ದಶಕಗಳ ಬಳಿಕ ತಾವು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿ ಬರಲಿದೆ ಎಂಬ ಸಣ್ಣ ಊಹೆಯೂ ಅವರಿಗೆ ಇರಲಿಲ್ಲ.
ಅಂದಹಾಗೆ ಇಂಥದ್ದೊಂದು ಘಟನೆ ನಡೆದಿರೋದು ರಾಜಸ್ಥಾನದ ಬುಂದಿ ಜಿಲ್ಲೆಯ ಹಿಂದೋಲಿ ಬ್ಲಾಕ್ನಲ್ಲಿ. ಈ ಮಹಿಳೆಯರನ್ನು ಭಿಲ್ವಾರಾ ಹಾಗೂ ಬುಂಡಿ ಜಿಲ್ಲೆಗಳಿಂದ ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧಿತ ಮಹಿಳೆಯರ ವಯಸ್ಸನ್ನು ಪರಿಗಣಿಸಿ ನ್ಯಾಯಾಲಯ ಈ ಪ್ರಕರಣ ಸಂಬಂಧ ಮಹಿಳೆಯರಿಗೆ ದಂಡ ವಿಧಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಿದೆ.
ಅಂದಹಾಗೆ ಇದು ಐದು ದಶಕಗಳ ಹಿಂದೆ ನಡೆದ ಘಟನೆಯಾಗಿದೆ. 1977ರಲ್ಲಿ ಕಾಡಿನಿಂದ ಮರ ಕಡಿಯುತ್ತಿದ್ದ 12 ಮಹಿಳೆಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಪೊಲೀಸರು ಮರೆತಿದ್ದಾರೆ. ಆದರೆ ಇತ್ತೀಚಿಗೆ ಬಂಡಿ ಪೊಲೀಸ್ ಠಾಣೆಗಳ ಶಾಶ್ವತ ವಾರಂಟಿಗಳ ವಿರುದ್ಧ ವಿಶೇಷ ಅಭಿಯಾನ ಆರಂಭಿಸಿದ್ದ ಸಂದರ್ಭದಲ್ಲಿ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಪ್ರಕರಣವನ್ನು ವಿಲೇವಾರಿ ಮಾಡಲು ಪೊಲೀಸರು ಆರೋಪಿ ಮಹಿಳೆಯರು ಎಲ್ಲಿದ್ದಾರೆ ಎಂದು ಶೋಧ ಕಾರ್ಯ ಆರಂಭಿಸಿದರು. 12 ಮಹಿಳೆಯರ ಪೈಕಿ ಏಳು ಮಂದಿಯನ್ನು ಪೊಲೀಸರ ವಿಶೇಷ ತಂಡ ಬಂಧಿಸಿದೆ. ಈ ಪೈಕಿ ಮೂವರು ಸಾವನ್ನಪ್ಪಿದ್ದಾರೆ ಎಂದು ಬುಂಡಿಯ ಸದರ್ ಪೊಲೀಸ್ ಠಾಣೆ ಎಸ್ಹೆಚ್ಒ ಅರವಿಂದ ಭಾರದ್ವಾಜ್ ಹೇಳಿದ್ದಾರೆ. ಇಬ್ಬರನ್ನು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಆದರೆ ಮಹಿಳೆಯರ ವಯಸ್ಸನ್ನು ಪರಿಗಣಿಸಿ ನ್ಯಾಯಾಲಯ ಸ್ವಲ್ಪ ದಂಡವನ್ನು ವಿಧಿಸಿದೆ.
ಆಗ ನಮಗೆ ಕಾನೂನಿನ ಅರಿವು ಇರಲಿಲ್ಲ. ಕಟ್ಟಿಗೆ ಅನಿವಾರ್ಯವಾಗಿತ್ತು. ಹೀಗಾಗಿ ಕಾಡಿಗೆ ತೆರಳಿ ಕಟ್ಟಿಗೆ ಸಂಗ್ರಹ ಮಾಡುತ್ತಿದ್ದೆವು. ಆದರೆ ಅರಣ್ಯಾಧಿಕಾರಿಯೊಬ್ಬರು ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಮಹಿಳೆಯರು ಹೇಳಿದ್ದಾರೆ.