ಜೈಪುರ್: ಪತ್ನಿ ಗರ್ಭಿಣಿಯಾಗಲು ಇಚ್ಛಿಸಿದ್ದರಿಂದ ಜೈಲಿನಲ್ಲಿದ್ದ ಅಪರಾಧಿಗೆ ರಾಜಸ್ಥಾನ ಹೈಕೋರ್ಟ್ ತುರ್ತು ಪೆರೋಲ್ ನೀಡಿದೆ.
ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಸಮೀರ್ ಜೈನ್ ಅವರಿದ್ದ ರಾಜಸ್ಥಾನ ಹೈಕೋರ್ಟ್ ವಿಭಾಗೀಯ ಪೀಠ, ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಅಪರಾಧಿ ಪತ್ನಿ ಗರ್ಭ ಧರಿಸಲು ಇಚ್ಛಿಸಿದ ಹಿನ್ನೆಲೆಯಲ್ಲಿ 15 ದಿನಗಳ ಕಾಲ ಪೆರೋಲ್ ನೀಡಿ ಆದೇಶಿಸಿದೆ.
ಬಾಲಕಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ರಾಹುಲ್ ಎಂಬ ಅಪರಾಧಿ ಪೋಕ್ಸೋ ಸೇರಿದಂತೆ ವಿವಿಧ ಕಾಯ್ದೆಗಳಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ರಾಜಸ್ಥಾನದ ಆಳ್ವಾರ್ ಸೆಂಟ್ರಲ್ ಜೈಲ್ನಲ್ಲಿದ್ದಾನೆ.
ಈತನ ಪತ್ನಿ, ತಾಯಿ ಆಗುವ ಇಚ್ಛೆ ಹೊಂದಿದ್ದು ಪೆರೋಲ್ ನೀಡುವಂತೆ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಎರಡು ವರ್ಷಕ್ಕೂ ಅಧಿಕ ಕಾಲ ರಾಹುಲ್ ಶಿಕ್ಷೆ ಅನುಭವಿಸಿದ್ದು, ಯುವ ಪತ್ನಿ ಮಕ್ಕಳಿಲ್ಲದ ಕಾರಣ ದೀರ್ಘಕಾಲ ಬದುಕಬೇಕಾಗುತ್ತದೆ. ಪತಿಯೊಂದಿಗೆ ತನ್ನ ಬಂಧವನ್ನು ಉಳಿಸಿಕೊಳ್ಳಲು ಮತ್ತು ಅವರ ಸಂಬಂಧ ಮುಂದುವರೆಯಲು ಬಯಸಿದ್ದಾರೆ ಎನ್ನುವ ಅಂಶಗಳನ್ನು ಗಮನಿಸಿ ಹಾಗೂ ವಂಶಾವಳಿ ಸಂರಕ್ಷಿಸುವ ಉದ್ದೇಶದಿಂದ ಮಗುವನ್ನು ಹೊಂದಲು ಅರ್ಜಿ ಸಲ್ಲಿಸಿದ್ದಾರೆ. ಅವರ ವಯಸ್ಸನ್ನು ಪರಿಗಣಿಸಿ 15 ದಿನಗಳ ಕಾಲ ಪೆರೊಲ್ ಮೇಲೆ ಬಿಡುಗಡೆ ಮಾಡಲು ಒಪ್ಪಿದೆ. 2 ಲಕ್ಷ ರೂಪಾಯಿ ಶ್ಯೂರಿಟಿ ನೀಡುವಂತೆ ಸೂಚಿಸಿದೆ.