ರಾಜಸ್ಥಾನದ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಅವರ ಸೋದರಳಿಯ ಮದ್ಯದ ಅಮಲಿನಲ್ಲಿ ಹೋಟೆಲ್ ವೊಂದನ್ನು ಧ್ವಂಸಗೊಳಿಸಿರುವ ಆರೋಪ ಕೇಳಿಬಂದಿದೆ. ಆರೋಪಿ ಹರ್ಷದೀಪ್ ಖಚರಿಯಾವಾಸ್ ಬುಧವಾರ ಕುಡಿದ ಅಮಲಿನಲ್ಲಿ ಐದರಿಂದ ಆರು ಜನರ ಗುಂಪಿನೊಂದಿಗೆ ಬಂದು ಹೋಟೆಲ್ ನಲ್ಲಿದ್ದ ಅತಿಥಿಯೊಂದಿಗೆ ಜಗಳವಾಡಿ ತೊಂದರೆ ನೀಡಿದರು ಎಂದು ಹೋಟೆಲ್ ಮಾಲೀಕ ಅಭಿಮನ್ಯು ಸಿಂಗ್ ಹೇಳಿದ್ದಾರೆ. ಜೈಪುರದಲ್ಲಿ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೋಟೆಲ್ ಗೆ ನುಗ್ಗಿದ ಆರೋಪಿ ಹರ್ಷದೀಪ್ ಖಚರಿಯಾವಾಸ್ ಹೋಟೆಲ್ ಸಿಬ್ಬಂದಿಗೆ ಪ್ರತಿ ಕೊಠಡಿಯನ್ನು ಓಪನ್ ಮಾಡುವಂತೆ ಗದರಿದರು. ಕೊಠಡಿಗಳಲ್ಲಿ ಅವರಿಗೆ ಬೇಕಾದ ಅತಿಥಿಯೊಬ್ಬರನ್ನ ಹುಡುಕುವಂತೆ ಹೇಳಿದರು. ಆದರೆ ನಾವು ಕೊಠಡಿಗಳನ್ನು ತೆರೆಯಲು ನಿರಾಕರಿಸಿದಾಗ ಅವರು 20ರಿಂದ 25 ವ್ಯಕ್ತಿಗಳನ್ನ ಕರೆಸಿ ಹೋಟೆಲ್ ಆಸ್ತಿಯನ್ನು ಹಾನಿ ಮಾಡಲು ಪ್ರಾರಂಭಿಸಿದರು ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ಗಲಾಟೆ ನಂತರ ಅವರು ಹೋಟೆಲ್ ನಲ್ಲಿದ್ದ ಸಿಸಿ ಕ್ಯಾಮೆರಾಗಳ ರೆಕಾರ್ಡಿಂಗ್ ಅನ್ನು ನಾಶಮಾಡಲು ಮುಂದಾದರು. ಆದರೆ ನಾವು ಅವುಗಳನ್ನು ರಕ್ಷಿಸಿಕೊಂಡಿದ್ದೇವೆ. ಆದರೆ ನಮಗೆ ಈಗ ಬೆದರಿಕೆ, ಕಿರುಕುಳ ನೀಡಲಾಗುತ್ತಿದೆ. ನಮಗೆ ಹಲವರು ಕರೆ ಮಾಡಿ ಒತ್ತಡ ಹಾಕುತ್ತಿದ್ದಾರೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
ಜೈಪುರದ ವೈಶಾಲಿ ಪೊಲೀಸ್ ಠಾಣೆಯ ಎಸ್ಎಚ್ಒ ಶಿವನಾರಾಯಣ್ ಮಾತನಾಡಿ ಘಟನೆ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ. ದೂರು ಆಧರಿಸಿ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.