ನೆರೆ ಮನೆಯವನು ಫೋನ್ ಮಾಡಿ ಪೀಡಿಸುತ್ತಿದ್ದಾನೆಂದು ಮನನೊಂದ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆಯೊಂದು ವರದಿಯಾಗಿದೆ. ಪಕ್ಕದ ಮನೆಯಾತ ತನ್ನ ಪತ್ನಿಗೆ ದೂರವಾಣಿ ಕರೆ ಮಾಡಿ ತೊಂದರೆ ಕೊಡುತ್ತಿದ್ದ. ಇದೇ ಕಾರಣಕ್ಕೆ ಆಕೆ ಈ ಕಠಿಣ ನಿರ್ಧಾರ ಕೈಗೊಂಡಿದ್ದಾಳೆ ಎಂದು ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸುಮನ್ ಎಂದು ಗುರುತಿಸಲಾಗಿದೆ. ಜೈಪುರದ ದೋಢ್ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ವಾ ಗ್ರಾಮದಲ್ಲಿ ಘಟನೆ ನಡೆದಿದೆ.
ಶುಕ್ರವಾರ ಸಂಜೆ ಮನೆಯ ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಮೃತ ಸುಮನ್ ಪತಿ ಭನರಾಮ್ ನೆರೆಮನೆಯ ಯುವಕ ಮುಕೇಶ್ ವಿರುದ್ಧ ಆರೋಪ ಹೊರಿಸಿದ್ದಾರೆ. ನನ್ನ ಪತ್ನಿಗೆ ಪದೇ ಪದೇ ಕರೆ ಮಾಡುತ್ತಿದ್ದ ಮುಕೇಶ್ ಆಕೆಗೆ ಪೀಡಿಸುತ್ತಿದ್ದ ಎಂದು ಹೇಳಿದ್ದಾರೆ. ನಾಲ್ಕು ತಿಂಗಳ ಹಿಂದೆಯೂ ಭನರಾಮ್ ಇದೇ ಕಾರಣಕ್ಕೆ ಮುಖೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ.
ಇನ್ನು ಈ ಪ್ರಕರಣದ ವಿಚಾರವಾಗಿ ಮಾತನಾಡಿದ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆಗೆ ನಿಖರ ಕಾರಣವನ್ನು ತಿಳಿದುಕೊಳ್ಳಲು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ. ಮಹಿಳೆಯ ಕುಟುಂಬಸ್ಥರು ಹಾಗೂ ನೆರೆಹೊರೆಯವರ ವಿಚಾರಣೆಯನ್ನೂ ನಡೆಸಲಾಗುತ್ತದೆ. ಈ ಘಟನೆಯಿಂದ ಆಕೆಯ ಪತಿ ಆಘಾತಕ್ಕೊಳಗಾಗಿದ್ದಾರೆ. ಹೀಗಾಗಿ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿಲ್ಲ ಎಂದು ಹೇಳಿದ್ದಾರೆ.