ವಿಡಿಯೋ ಕಾಲ್ ಮೂಲಕ ಪಾಕಿಸ್ತಾನದ ಮಹಿಳೆಯನ್ನು ವಿವಾಹವಾದ ರಾಜಸ್ತಾನ ಮೂಲದ ವ್ಯಕ್ತಿ ಮೇಲೆ ವರದಕ್ಷಿಣೆ ಕಿರುಕುಳ ಕೇಸ್ ದಾಖಲಾಗಿದೆ. ಆತನ ಮೊದಲ ಪತ್ನಿ ವರದಕ್ಷಿಣೆ ಕಿರುಕುಳ ದೂರು ನೀಡಿದ್ದಾಳೆ. ಚುರುವಿನ ಪಿತಿಸರ್ ನಿವಾಸಿ ರೆಹಮಾನ್, ಪಾಕಿಸ್ತಾನದ ಮೆಹ್ವಿಶ್ ಎಂಬಾಕೆಯನ್ನು ವಿಡಿಯೋ ಕಾಲ್ ಮೂಲಕ ಮದುವೆ ಆಗಿದ್ದ. ಎರಡು ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಇಬ್ಬರ ಮದುವೆ ನಡೆದಿದೆ. ಈಗ ಮೆಹ್ವಿಶ್, ಭಾರತಕ್ಕೆ ಬಂದಿದ್ದಾಳೆ.
ಸದ್ಯ ರೆಹಮಾನ್ ಕುವೈತ್ ನಲ್ಲಿದ್ದು, ಮೆಹ್ವಿಶ್ ಭಾರತಕ್ಕೆ ತನ್ನ ಅತ್ತೆ ನೋಡಲು ಬಂದಿದ್ದಾಳೆ. ಆಕೆ ಹಾಗೂ ರೆಹಮಾನ್ ಇಬ್ಬರಿಗೂ ಇದು ಎರಡನೇ ಮದುವೆ. ರೆಹಮಾನ್ ಮೊದಲ ಪತ್ನಿ ಫರೀದಾ ಬಾನೊಗೆ ಇಬ್ಬರು ಮಕ್ಕಳು. ಮೆಹ್ವಿಶ್ ಪರಿಚಯವಾಗಿ, ಅದು ಪ್ರೀತಿಗೆ ತಿರುಗುತ್ತಿದ್ದಂತೆ ರೆಹಮಾನ್, ಫರೀದಾ ಬಾನೊಗೆ ತಲಾಕ್ ನೀಡಿದ್ದ. ಮೂರು ಬಾರಿ ತಲಾಕ್ ಹೇಳಿ ಆಕೆಯನ್ನು ಕೈಬಿಟ್ಟಿದ್ದ. ಆತ ವ್ಯಾಪಾರ ಶುರು ಮಾಡಲು ಫರೀದಾ ಬಾನೊ, ಬಂಗಾರವನ್ನು ಅಡವಿಟ್ಟಿದ್ದಳು.
ಈಗ ಮೆಹ್ವಿಶ್ ಭಾರತಕ್ಕೆ ಬರ್ತಿದ್ದಂತೆ ಫರೀದಾ ಬಾನೊ ದೂರು ನೀಡಿದ್ದಾಳೆ. ಪತಿ ಮೂರು ತಲಾಕ್ ನೀಡಿದ್ದಲ್ಲದೆ, ವರದಕ್ಷಿಣೆ ಕಿರುಕುಳ ನೀಡಿದ್ದಾನೆಂದು ದೂರಿದ್ದಾಳೆ. ಮೆಹ್ವಿಶ್ ಬಗ್ಗೆಯೂ ದೂರು ನೀಡಿದ್ದು, ಪಾಕಿಸ್ತಾನಿ ಮಹಿಳೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾಳೆ. ಮೊದಲ ಪತ್ನಿಯಾದ ನನಗೆ ಮತ್ತು ತನ್ನ ಮಕ್ಕಳಿಗೆ ನ್ಯಾಯ ದೊರಕಿಸಿಕೊಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾಳೆ.