ಆಘಾತಕಾರಿ ಘಟನೆಯೊಂದರಲ್ಲಿ ರಾಜಸ್ಥಾನದ ಡುಂಗರ್‌ಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ 60 ವರ್ಷದ ತಂದೆಯನ್ನು ಕೊಂದು ಶವವನ್ನು ಅವರ ಮನೆಯಲ್ಲಿ ಹೂತಿಟ್ಟಿದ್ದಾನೆ. ಆರೋಪಿ ಚುನ್ನಿ ಲಾಲ್ ತನ್ನ ತಂದೆ ರಾಜೇಂಗ್ ಬರಾಂಡ ಅವರೊಂದಿಗೆ ಬುಧವಾರ ಜಗಳವಾಡಿದ್ದು, ಈ ಸಂದರ್ಭದಲ್ಲಿ ಆತನ ತಲೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ.
ಬರಾಂಡ ಸ್ಥಳದಲ್ಲೇ ಸಾವನ್ನಪ್ಪಿದ್ದು, ಚುನ್ನಿ ಲಾಲ್ ಶವವನ್ನು ಅವರ ಮನೆಯ ಅಂಗಳದಲ್ಲಿ ಹೂತು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬರಾಂಡನಿಗೆ ಪ್ರಕಾಶ್, ದಿನೇಶ್, ಪಪ್ಪು ಮತ್ತು ಚುನ್ನಿ ಲಾಲ್ ಎಂಬ ನಾಲ್ಕು ಗಂಡು ಮಕ್ಕಳಿದ್ದರು. ಪ್ರಕಾಶ್ ಮತ್ತು ಅವರ ತಾಯಿ ಅಹಮದಾಬಾದ್‌ನಲ್ಲಿ ವಾಸವಾಗಿದ್ದರೆ, ಇತರ ಒಡಹುಟ್ಟಿದವರು ಡುಂಗರ್‌ಪುರದ ಬಲ್ವಾರ ಗ್ರಾಮದಲ್ಲಿ ವಾಸವಾಗಿದ್ದರು. ಬರಂಡಾ ಅವರು ಚುನ್ನಿ ಲಾಲ್ ಅವರೊಂದಿಗೆ ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ತಂದೆಯನ್ನು ಕಾಣುತ್ತಿಲ್ಲ ಎಂದು ದಿನೇಶ್ ಮತ್ತು ಪಪ್ಪು ಪ್ರಕಾಶ್‌ಗೆ ಕರೆ ಮಾಡಿದರು. ಪ್ರಕಾಶ್ ತನ್ನ ತಾಯಿಯೊಂದಿಗೆ ಗ್ರಾಮಕ್ಕೆ ಬಂದು ಚುನ್ನಿ ಲಾಲ್ ನನ್ನು ವಿಚಾರಿಸಿದ್ದಾನೆ. ಆರಂಭದಲ್ಲಿ ಚುನ್ನಿ ಲಾಲ್ ಸುಳ್ಳು ಹೇಳಿದ್ದು, ನಂತರ ಆತನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತದೇಹವನ್ನು ಅಂಗಳದಿಂದ ಹೊರತೆಗೆದು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಚುನ್ನಿ ಲಾಲ್‌ನನ್ನು ಬಂಧಿಸಲಾಗಿದೆ.