ರಾಜಸ್ಥಾನದಲ್ಲೊಂದು ವಿಲಕ್ಷಣ ಪ್ರಕರಣ ನಡೆದಿದೆ. ವ್ಯಕ್ತಿಯೊಬ್ಬ ಬದುಕಿದ್ದರೂ ಸಹ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ಆತನ ಹೆಸರನ್ನು ಸತ್ತವರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಅಲ್ಲದೆ ಈ ಕುರಿತಂತೆ ಡೆತ್ ಸರ್ಟಿಫಿಕೇಟ್ ಕೂಡ ನೀಡಲಾಗಿತ್ತು. ಆದರೆ ಈ ವ್ಯಕ್ತಿ ತಾನು ಬದುಕಿದ್ದೇನೆಂದು ಅಧಿಕಾರಿಗಳಿಗೆ ಪರಿಪರಿಯಾಗಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಆತ ಯಾರೂ ಊಹಿಸದ ಕೆಲಸ ಮಾಡಿದ್ದಾನೆ.
ಹೌದು, ಇಂತಹ ಒಂದು ಘಟನೆ ರಾಜಸ್ಥಾನದ ಬಲತ್ರಾ ಬಳಿಯ ಮಿಥೋರಾ ಗ್ರಾಮದಲ್ಲಿ ನಡೆದಿದ್ದು, ಅಲ್ಲಿನ ನಿವಾಸಿ ಬಾಬುರಾಮ್ ಬದುಕಿದ್ದರೂ ಸಹ ಆತನ ಹೆಸರಿನಲ್ಲಿ ಡೆತ್ ಸರ್ಟಿಫಿಕೇಟ್ ನೀಡಲಾಗಿತ್ತು. ಇದರ ಪರಿಣಾಮ ಆತ ಸರ್ಕಾರಿ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆಯಲು ವಿಫಲನಾಗಿದ್ದ. ಹೀಗಾಗಿ ಅಧಿಕಾರಿಗಳ ಬಳಿ ತಾನು ಬದುಕಿದ್ದೇನೆ. ನನ್ನ ಹೆಸರಿನಲ್ಲಿ ವಿತರಿಸಲಾಗಿರುವ ಡೆತ್ ಸರ್ಟಿಫಿಕೇಟ್ ಹಿಂಪಡೆಯಿರಿ ಎಂದು ಮನವಿ ಮಾಡಿದ್ದ.
ಆದರೆ ದಪ್ಪ ಚರ್ಮದ ಅಧಿಕಾರಿಗಳು ಇವನ ಮನವಿಗೆ ಬಹುಕಾಲ ಕಳೆದರೂ ಯಾವುದೇ ಸ್ಪಂದನೆ ನೀಡಲಿಲ್ಲ. ಇದರಿಂದ ಹತಾಶಗೊಂಡ ಆತ ಕೊನೆಗೆ ತಾನು ಬದುಕಿರುವುದನ್ನು ನಿರೂಪಿಸಲು ಅಡ್ಡದಾರಿ ಹಿಡಿದಿದ್ದಾನೆ. ಅಪರಾಧ ಕೃತ್ಯ ಎಸಗಿದರೆ ಪೊಲೀಸರು ಬರುತ್ತಾರೆ. ಆಗ ಅವರು ಕೇಸ್ ದಾಖಲಿಸಬೇಕಾದರೆ ನನ್ನ ಹೆಸರಿನಲ್ಲೇ ಮಾಡಬೇಕಿದ್ದು, ಆಗ ನಾನು ಬದುಕಿರುವುದು ಸಾಬೀತಾಗುತ್ತದೆ ಎಂಬ ಲೆಕ್ಕಾಚಾರ ಹಾಕಿ ಸ್ಥಳೀಯ ಶಾಲೆಗೆ ನುಗ್ಗಿ ಮುಖ್ಯೋಪಾಧ್ಯಾಯ ಸೇರಿದಂತೆ ಇಬ್ಬರಿಗೆ ಚಾಕುವಿನಿಂದ ಇರಿದಿದ್ದಾನೆ.
ಅಲ್ಲದೆ ಅದಕ್ಕೂ ಮುನ್ನ ಹತ್ತಕ್ಕೂ ಅಧಿಕ ಅಪರಾಧ ಕೃತ್ಯ ಮಾಡಿದ್ದರು ಸಿಕ್ಕಿಬಿದ್ದಿರಲಿಲ್ಲ ಎನ್ನಲಾಗಿದ್ದು, ಹೀಗಾಗಿ ಹಾಡಹಗಲೇ ಶಾಲೆಗೆ ನುಗ್ಗಿ ಈ ಹೀನ ಕೃತ್ಯ ಎಸಗಿದ್ದಾನೆ. ಜೊತೆಗೆ ಶಾಲಾ ಮಕ್ಕಳು ಸೇರಿದಂತೆ ಶಿಕ್ಷಕ ವೃಂದವನ್ನು ಒತ್ತೆಯಾಗಿಟ್ಟುಕೊಳ್ಳಲು ಯತ್ನಿಸಿದ್ದಾನೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರ ತಂಡ ಇದೀಗ ಆತನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಆತ ಎಸಗಿರುವ ಇತರೆ ಅಪರಾಧ ಕೃತ್ಯಗಳ ಕುರಿತೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳು ಮಾಡಿದ ಎಡವಟ್ಟಿಗೆ ಅಮಾಯಕ ಶಿಕ್ಷಕರು ಹಾಗೂ ಮಕ್ಕಳು ತೊಂದರೆ ಎದುರಿಸುವಂತಾಗಿತ್ತು.