ಮುಂಬೈನ ಗ್ಲೋಬಲ್ ಹಾಸ್ಪಿಟಲ್ಸ್‌ನ ಹಿರಿಯ ವೈದ್ಯ ಡಾ. ನೀಲೇಶ್ ಜಿ ಸತ್ಭಾಯಿ ನೇತೃತ್ವದ ತಂಡವೊಂದು ರೋಗಿಯೊಬ್ಬರಿಗೆ ಸ್ವತಂತ್ರವಾಗಿ ಬದುಕಲು ಬೇಕಾದ ಹೊಸ ಚೈತನ್ಯ ನೀಡಿದೆ. ವ್ಯಕ್ತಿಯೊಬ್ಬರಿಗೆ ಎರಡೂ ಕೈಗಳನ ಕಸಿ ಮಾಡುವ ಮೂಲಕ ಏಷ್ಯಾದಲ್ಲೇ ಮೊದಲ ಬಾರಿಗೆ ಹೀಗೊಂದು ಶಸ್ತ್ರಚಿಕಿತ್ಸೆ ಮಾಡಿದ ಆಸ್ಪತ್ರೆಯಾಗಿದೆ ಗ್ಲೋಬಲ್ ಹಾಸ್ಪಿಟಲ್ಸ್.
ರಾಜಸ್ಥಾನದ ಅಜ್ಮೇರ್‌ನ ನಿವಾಸಿ ಪ್ರೇಮಾರಾಮ್ 12 ವರ್ಷಗಳ ಹಿಂದೆ ಅಚಾನಕ್ಕಾಗಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸುತ್ತಿದ್ದ ಕಂಬವೊಂದನ್ನು ಮುಟ್ಟಿದ್ದಾರೆ. ಈ ವೇಳೆ ಬಹಳಷ್ಟು ಸುಟ್ಟ ಗಾಯಗಳು ಅವರಿಗೆ ಆಗಿವೆ.
ಕೂಡಲೇ ಅವರನ್ನು ಅಜ್ಮೇರ್‌ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪ್ರೇಮಾ ಬದುಕುಳಿಯಬೇಕಾದಲ್ಲಿ ಆತನ ಎರಡೂ ಕೈಗಳನ್ನು ತೆಗೆಯಬೇಕಾಗುತ್ತದೆ ಎಂದಿದ್ದಾರೆ. ಜೈಪುರದ ಆಸ್ಪತ್ರೆಗೆ ಹೋದಾಗಲೂ ಇದೇ ಮಾತುಗಳನ್ನು ಪ್ರೇಮಾ ಕುಟುಂಬ ಕೇಳಬೇಕಾಯಿತು.
ಕೊನೆಗೂ ತನ್ನೆರಡೂ ಕೈಗಳನ್ನು ತೋಳುಗಳವರೆಗೂ ಕಳೆದುಕೊಳ್ಳಬೇಕಾಗಿ ಬಂದ ಪ್ರೇಮಾಗೆ ಯೂರೋಪ್‌ನಲ್ಲಿ ಕೈಗಳ ಕಸಿ ಮಾಡುವ ಬಗ್ಗೆ ವಿಚಾರಿಸಿದಾಗ ಅದು ಆತನ ಕುಟುಂಬ ಕೈಗೆಟಕದ್ದು ಎಂದು ತಿಳಿಯಿತು.
ಇದೀಗ ಮುಂಬೈ ಗ್ಲೋಬಲ್ ಹಾಸ್ಪಿಟಲ್ಸ್‌ನ ವೈದ್ಯರು ನಿರಂತರ 16 ಗಂಟೆಗಳ ಕಾಲ ಸಮಯದಲ್ಲಿ, ಪ್ರೇಮಾಗೆ ಎರಡೂ ಕೈಗಳ ಕಸಿ ಮಾಡಿದ್ದಾರೆ. ನಾಲ್ಕು ವಾರಗಳ ತೀವ್ರ ನಿಗಾದಲ್ಲಿದ್ದ ಬಳಿಕ ಮಾರ್ಚ್ 9ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ಪ್ರೇಮಾಗೆ ಈಗ 18-24 ತಿಂಗಳ ಕಾಲ ಫಿಸಿಯೋಥೆರಪಿಯ ಅಗತ್ಯವಿದೆ. ಪ್ರೇಮಾ ಕೈಗಳು ಸಂಪೂರ್ಣವಾಗಿ ಕೆಲಸ ಮಾಡಲು ಇನ್ನೂ 18 ತಿಂಗಳು ಬೇಕಾಗುತ್ತದೆ.
ತನ್ನಂತೆ ಅಫಘಾತದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡ 4-5 ಮಂದಿಗೆ ಸಹಾಯ ಮಾಡಬೇಕೆಂಬುದು ಪ್ರೇಮಾ ಇಚ್ಛೆಯಾಗಿದೆ.