ಜೈಪುರ್: ಹೈಡ್ರೋಫೋಬಿಯಾದಿಂದ ಬಳಲುಲುತ್ತಿದ್ದನೆನ್ನಲಾದ 24 ವರ್ಷದ ವ್ಯಕ್ತಿ ಮಹಿಳೆಯನ್ನು ಕೊಂದು ಆಕೆಯ ಮಾಂಸವನ್ನು ಸೇವಿಸಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ.
ಹೆಚ್ಚಿನ ತನಿಖೆ ಮತ್ತು ಚಿಕಿತ್ಸೆಗಾಗಿ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶುಕ್ರವಾರ ಸೇಂದ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಸರದಾನ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ದನ ಮೇಯಿಸುತ್ತಿದ್ದ 65 ವರ್ಷದ ಶಾಂತಿದೇವಿಯನ್ನು ಆರೋಪಿ ಸುರೇಂದ್ರ ಠಾಕೂರ್ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಆಕೆಯ ಮಾಂಸವನ್ನು ತಿಂದಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಆರೋಪಿ ಮುಂಬೈನಿಂದ ಬಸ್ ನಲ್ಲಿ ಸೇಂದ್ರಾಗೆ ಬಂದಿದ್ದಾನೆ. ಆತನ ಬಳಿ ಬಸ್ ಟಿಕೆಟ್ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿದೇವಿ ಅವರ ಮಗ ಬೀರೇನ್ ಕಥತ್ ದೂರು ದಾಖಲಿಸಿದ್ದಾರೆ.
ನಾನು ಮೇಕೆಗಳನ್ನು ಮೇಯಿಸಿ ಹಿಂತಿರುಗುತ್ತಿದ್ದ ವೇಳೆ ಮೃತ ಮಹಿಳೆಯ ಮಾಂಸವನ್ನು ತಿನ್ನುತ್ತಿದ್ದ ವ್ಯಕ್ತಿಯನ್ನು ನೋಡಿದೆ. ರಕ್ತ ಕಂಡು ಭಯಗೊಂಡು ಅಲ್ಲಿಂದ ಓಡಿದೆ ಎಂದು ಪ್ರತ್ಯಕ್ಷದರ್ಶಿ ಕ್ಯಾತತ್ ಹೇಳಿದ್ದಾರೆ.
ಸ್ಥಳೀಯರಿಗೆ ಇದನ್ನು ತಿಳಿಸಿದಾಗ ಭಯಭೀತರಾಗಿದ್ದಾರೆ. ಆದರೆ, ಆರೋಪಿ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಹಿಂಬಾಲಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಸುರೇಂದ್ರ ಠಾಕೂರ್ ಮುಂಬೈ ನಿವಾಸಿಯಾಗಿದ್ದು, ಹೈಡ್ರೋಫೋಬಿಯಾದಿಂದ ಬಳಲುತ್ತಿದ್ದಾನೆ ಎಂದು ಬಂಗಾರ್ ಆಸ್ಪತ್ರೆಯ ವೈದ್ಯ ಡಾ. ಪ್ರವೀಣ್ ಹೇಳಿದ್ದಾರೆ. ಆತನಿಗೆ ಈ ಹಿಂದೆ ಹುಚ್ಚು ನಾಯಿ ಕಚ್ಚಿದ್ದು, ಸೂಕ್ತ ಚಿಕಿತ್ಸೆ ದೊರೆಯದಿರುವ ಶಂಕೆ ಇದೆ. ರೇಬಿಸ್ ಸೋಂಕಿನ ಮುಂದುವರೆದ ಹಂತದ ಪರಿಣಾಮವಾಗಿ ಆತ ಹೈಡ್ರೋಫೋಬಿಯಾದಿಂದ ಬಳಲುತ್ತಿರಬಹುದು ಎಂದು ಹೇಳಲಾಗಿದೆ.
ಮಾನಸಿಕ ಅಸ್ವಸ್ಥ ರೋಗಿಯಂತೆ, ಆಕ್ರಮಣಕಾರಿ ರೀತಿಯಲ್ಲಿ ಆತ ವರ್ತಿಸುತ್ತಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗಿದೆ. ಆತ ಗಲಾಟೆ ಮಾಡಿದ ನಂತರ ಹಾಸಿಗೆ ಮೇಲೆ ನರ್ಸಿಂಗ್ ಸಿಬ್ಬಂದಿ ಕಟ್ಟಿ ಹಾಕಿದ್ದಾರೆ ಎಂದು ಜೈತರನ್ ಉಪ ಪೊಲೀಸ್ ಅಧೀಕ್ಷಕ ಸುಖರಾಮ್ ಬಿಷ್ಣೊಯ್ ಹೇಳಿದ್ದಾರೆ.
ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.