ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿಯೇ ವಧುವಿನ ನಿವಾಸಕ್ಕೆ ಕುದುರೆ ಏರಿ ಹೋಗುತ್ತಿದ್ದ ದಲಿತ ವರನ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಆಘಾತಕಾರಿ ಘಟನೆಯು ಜೈಪುರದಲ್ಲಿ ನಡೆದಿದೆ.
ಈ ಪ್ರಕರಣ ಸಂಬಂಧ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ ಉಪ ಪೊಲೀಸ್ ವರಿಷ್ಠಾಧಿಕಾರಿ, ಎಎಸ್ಪಿ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.
ಏನಿದು ಪ್ರಕರಣ..?
ಜೈಪುರದ ಕೋಟ್ಪುಟ್ಲಿಯ ಕೆರೋಡಿ ಎಂಬ ಗ್ರಾಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಲಿತ ಜಾತಿಗೆ ಸೇರಿದ ವರನೊಬ್ಬ ಕುದುರೆಯೇರಿ ಮದುವೆ ಮೆರವಣಿಗೆ ನಡೆಸಿದ್ದನು. ಇದಕ್ಕೆ ಗ್ರಾಮದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಧುವಿನ ತಂದೆ ಹರಿಪಾಲ್ ಬಲಾಯ್ ಎಂಬವರು ಪೊಲೀಸ್ ಭದ್ರತೆ ಕೋರಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಮದುವೆ ದಿನದಂದು ಭದ್ರತೆಗೆಂದು 70 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಮದುವೆ ದಿಬ್ಬಣವು ವಧುವಿನ ನಿವಾಸದ ಬಳಿ ಬರುತ್ತಿದ್ದಂತೆಯೇ ವಧು-ವರರ ಕುಟುಂಬಸ್ಥರು ತೋರಣ ಸಂಪ್ರದಾಯವನ್ನು ನಡೆಸುತ್ತಿದ್ದರು. ಇದೇ ವೇಳೆಗೆ ಎಲ್ಲಿಂದಲೂ ಬಂದ ಜನರ ಗುಂಪು ಪೊಲೀಸರ ಸಮ್ಮುಖದಲ್ಲಿಯೇ ಕಲ್ಲು ತೂರಾಟ ನಡೆಸಿದೆ. 15 ನಿಮಿಷಗಳ ಕಾಲ ನಡೆದ ಕಲ್ಲು ತೂರಾಟದಲ್ಲಿ ಅನೇಕರು ಗಾಯಗೊಂಡಿದ್ದಾರೆ.
ಕಲ್ಲು ತೂರಾಟ ಪ್ರಕರಣದಲ್ಲಿ ಭಾಗಿಯಾದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಜೊತೆಯಲ್ಲಿ ಡಿಎಸ್ಪಿ ದಿನೇಶ್ ಕುಮಾರ್, ಎಎಸ್ಪಿ ರಾಮ್ ಕುಮಾರ್ ಹಾಗೂ ಎಸ್ಹೆಚ್ಓವನ್ನು ಸೇವೆಯಿಂದ ಹೊರಗಿಡಲಾಗಿದೆ.