ರಾಜಸ್ಥಾನ: 2011ರಲ್ಲಿ ನಡೆದ ಪೊಲೀಸ್ ಇನ್ಸ್‌ಪೆಕ್ಟರ್ ಫೂಲ್ ಮೊಹಮ್ಮದ್ ಹತ್ಯೆ ಪ್ರಕರಣದಲ್ಲಿ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ವಿಶೇಷ ನ್ಯಾಯಾಲಯವು ಶುಕ್ರವಾರ 30 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮಾಜಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಸಿಂಗ್ ಸೇರಿದಂತೆ 30 ಜನರನ್ನು ದೋಷಿಗಳೆಂದು ಘೋಷಿಸಿದೆ. ಈ ಘಟನೆಯಲ್ಲಿ 49 ಜನರನ್ನು ಕೋರ್ಟ್ ಖುಲಾಸೆಗೊಳಿಸಿದೆ.
ಪೊಲೀಸ್ ಇನ್ಸ್‌ಪೆಕ್ಟರ್ ಫೂಲ್ ಮೊಹಮ್ಮದ್ ಮಾರ್ಚ್ 17, 2011 ರಂದು ಸುರ್ವಾಲ್ ಗ್ರಾಮಕ್ಕೆ ಹೋಗಿದ್ದರು. ಅಲ್ಲಿ ವ್ಯಕ್ತಿಯೊಬ್ಬ ನೀರಿನ ಟ್ಯಾಂಕ್ ಮೇಲೆ ಹತ್ತಿ ಸಾಯಲು ಮುಂದಾಗಿದ್ದ. ಪೊಲೀಸರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವುದು ಆತನ ವಾದವಾಗಿತ್ತು. ಈತ ಕೊಲೆ ಕೇಸ್ನಲ್ಲಿ ಸಿಕ್ಕಿಬಿದ್ದಿದ್ದ.
ವ್ಯಕ್ತಿ ಮೇಲಿನಿಂದ ಜಿಗಿಯುತ್ತಿದ್ದಂತೆ, ಕೋಪಗೊಂಡ ಜನಸಮೂಹವು ಪೊಲೀಸ್ ಅಧಿಕಾರಿಯ ಮೇಲೆ ಕಲ್ಲು ತೂರಾಟ ಮಾಡಿದ್ದೂ ಅಲ್ಲದೇ ಅವರನ್ನು ಜೀವಂತವಾಗಿ ಸುಟ್ಟು ಹಾಕಿದ್ದರು.