ಜೈಪುರ: ಜೈಪುರದಲ್ಲಿ ವ್ಯಕ್ತಿಯನ್ನು ಆತನ ಮಗನ ಮುಂದೆ 3 ಪೊಲೀಸರು ಥಳಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ತನ್ನ ತಂದೆಯನ್ನು ಥಳಿಸದಂತೆ ಪೋಲೀಸ್ ಪಾದಗಳನ್ನು ಮುಟ್ಟಿ ಬಾಲಕ ಬೇಡಿಕೊಂಡಿದ್ದಾನೆ. ಪೊಲೀಸ್ ಮಗುವನ್ನು ದೂರ ಸರಿಸುತ್ತಾನೆ. ಅದೇ ವೇಳೆ ಇಬ್ಬರು ಪೊಲೀಸರು ನೆಲಕ್ಕೆ ಕೆಡವಿಕೊಂಡು ವ್ಯಕ್ತಿಯ ಕೈಗಳನ್ನು ತಿರುಗಿಸುತ್ತಾರೆ.
ಜೈಸಿಂಗ್‌ಪುರ ಪ್ರದೇಶದ ಜೈಪುರದ ಭಂಕಟ್ರೋಟಾದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಥಳಿಸಿದ ವ್ಯಕ್ತಿಯನ್ನು 35 ವರ್ಷದ ಚಿರಂಜಿಲಾಲ್ ಎಂದು ಗುರುತಿಸಲಾಗಿದೆ. ಅವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್(ಸಿಎ) ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಘಟನೆಯ ದಿನ ಪೊಲೀಸರು ಆತನ ಪತ್ನಿಯೊಂದಿಗೆ ಭಾಂಕತ್ರೋಟ ತಲುಪಿ ಮನೆಯ ಬೀಗ ಒಡೆಯಲು ಯತ್ನಿಸಿದ್ದರು ಎಂದು ಚಿರಂಜಿಲಾಲ್ ಕುಟುಂಬಸ್ಥರು ಆರೋಪಿಸಿದ್ದಾರೆ. ಬೀಗ ಒಡೆಯದಂತೆ ಚಿರಂಜಿಲಾಲ್ ಒತ್ತಾಯಿಸಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಪೊಲೀಸರು ಆತನಿಗೆ ಥಳಿಸಿದ್ದಾರೆ.
ಪೊಲೀಸರು ವ್ಯಕ್ತಿಯನ್ನು ಅಮಾನುಷವಾಗಿ ಥಳಿಸಿದ್ದಾರೆ. ಮೊಣಕಾಲುಗಳ ಮೇಲೆ ಕೈಮುಗಿದು ಬೇಡಿಕೊಳ್ಳುತ್ತಿದ್ದ ಮತ್ತು ತನ್ನ ತಂದೆಯನ್ನು ಹೊಡೆಯಬೇಡಿ ಎಂದು ಪೊಲೀಸರನ್ನು ವಿನಂತಿಸುತ್ತಿದ್ದ ಮಗನ ಬಗ್ಗೆ ಪೊಲೀಸರಿಗೆ ಕನಿಕರವೂ ಬಂದಿಲ್ಲ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಚಿರಂಜಿಲಾಲ್ ಕುಟುಂಬದ ನಾಲ್ವರನ್ನು ಠಾಣೆಗೆ ಕರೆದೊಯ್ದಿದ್ದಾರೆ.
ವಿಡಿಯೋ ವೈರಲ್ ಆದ ನಂತರ ಅಧಿಕಾರಿಗಳು ಗಮನಿಸಿ ತನಿಖೆಗೆ ಆದೇಶಿಸಿದ್ದಾರೆ. ಇದೇ ವೇಳೆ ಪೊಲೀಸರಿಂದ ಥಳಿತಕ್ಕೊಳಗಾಗಿದ್ದ ಚಿರಂಜಿಲಾಲ್ ಅವರ ಕೈಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.