ಜೈಪುರ: ದಲಿತ ವ್ಯಕ್ತಿಯೊಬ್ಬನಿಗೆ ಶಾಸಕ ಶೂ ನೆಕ್ಕಲು ಒತ್ತಾಯಿಸಿದ ಮತ್ತು ಪೊಲೀಸ್ ಅಧಿಕಾರಿ ಮೂತ್ರ ವಿಸರ್ಜನೆ ಮಾಡಿದ ಆರೋಪ ಕೇಳಿ ಬಂದಿದೆ.
ಕಾಂಗ್ರೆಸ್ ಶಾಸಕ ಗೋಪಾಲ್ ಮೀನಾ ಮತ್ತು ಐವರು ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಪೊಲೀಸರು ತನ್ನ ದೂರನ್ನು ನಿರ್ಲಕ್ಷಿಸಿದ್ದಾರೆ ಎಂದು ಸಂತ್ರಸ್ತ ಆರೋಪಿಸಿದ ನಂತರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ.
ಜಾಮ್ವಾ ರಾಮ್ ಗಢ ಶಾಸಕ ಗೋಪಾಲ್ ಮೀನಾ ತಮ್ಮ ಮೇಲಿನ ಆರೋಪ ತಳ್ಳಿಹಾಕಿದ್ದಾರೆ. ಆಸ್ತಿ ಸಂಬಂಧಿತ ವಿವಾದದಿಂದಾಗಿ ನನ್ನ ವಿರುದ್ಧ ನಕಲಿ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದು ನನ್ನ ಮೇಲೆ ಒತ್ತಡ ಹೇರುವ ತಂತ್ರವಾಗಿದೆ. ಕೆಲವರು ಅಕ್ರಮ ಭೂ ಒತ್ತುವರಿಗೆ ಸಹಾಯ ಮಾಡಬೇಕೆಂದು ಬಯಸುತ್ತಾರೆ. ಈ ಪ್ರಕರಣವನ್ನು ದಾಖಲಿಸಿದ ವ್ಯಕ್ತಿ ನನಗೆ ತಿಳಿದಿಲ್ಲ ಎಂದು ಗೋಪಾಲ್ ಮೀನಾ ಹೇಳಿದ್ದಾರೆ.
ಜೂನ್ 30 ರಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತನ್ನನ್ನು ಪೊಲೀಸರು ಎತ್ತಿಕೊಂಡು ಶಾಸಕರು ಶೂ ನೆಕ್ಕಲು ಒತ್ತಾಯಿಸಿದ ಸ್ಥಳಕ್ಕೆ ಕರೆದೊಯ್ದರು. ಘಟನೆಯ ನಂತರ ಸರ್ಕಲ್ ಆಫೀಸರ್ ಶಿವಕುಮಾರ್ ಭಾರದ್ವಾಜ್ ತಮ್ಮ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಜುಲೈ 27 ರಂದು ಪ್ರಕರಣವನ್ನು ದಾಖಲಿಸಲಾಗಿದೆ. ಸಿಐಡಿ ತನಿಖೆಗೆ ಕಳುಹಿಸಲಾಗಿದೆ ಎಂದು ಜಾಮ್ವಾ ರಾಮ್‌ಗಢ್ ಎಸ್‌ಹೆಚ್‌ಒ ಸೀತಾರಾಮ್ ಸೈನಿ ಹೇಳಿದ್ದಾರೆ.
ಎಫ್‌ಐಆರ್‌ನಲ್ಲಿ ಸರ್ಕಲ್ ಆಫೀಸರ್ ಹೊರತುಪಡಿಸಿ ನಾಲ್ಕು ಪೊಲೀಸ್ ಠಾಣೆಗಳ ಎಸ್‌ಹೆಚ್‌ಒಗಳನ್ನು ಹೆಸರಿಸಲಾಗಿದೆ ಎಂದು ತಿಳಿಸಿದ್ದಾರೆ.