ರಾಜಸ್ಥಾನದ ಜೋಧ್ ಪುರದ ಸೆಂಟ್ರಲ್ ಸ್ಕೂಲ್ ನಲ್ಲಿ ದೈಹಿಕ ಶಿಕ್ಷಕನೊಬ್ಬ ಕನಿಷ್ಠ 12 ವಿದ್ಯಾರ್ಥಿನಿಯರಿಗೆ ಲೈಗಿಕ ಕಿರುಕುಳ ನೀಡಿದ ಮತ್ತು ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ.
ಶಾಲಾ ಆಡಳಿತ ಮಂಡಳಿಗೆ ವಿದ್ಯಾರ್ಥಿನಿಯರು ದೂರು ನೀಡಿದ ನಂತರ ಲೈಂಗಿಕ ಕಿರುಕುಳ ಮತ್ತು ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಶಾಲಾ ಸಮಿತಿಯ ವರದಿಯ ಆಧಾರದ ಮೇಲೆ ಪೊಲೀಸರು POCSO ಕಾಯ್ದೆ ಹಾಗೂ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದುವರೆಗೆ ಆರೋಪಿಯನ್ನು ಬಂಧಿಸಿಲ್ಲ.. ತನಿಖೆ ಇನ್ನೂ ಮುಂದುವರೆದಿದೆ ಎಂದು ಪೊಲೀಸ್ ಉಪ ಆಯುಕ್ತರಾದ ಅಮೃತಾ ದುಹಾನ್ ಹೇಳಿದ್ದಾರೆ.
ತಮಗೆ ದೈಹಿಕ ಶಿಕ್ಷಕ ಕಿರುಕುಳ ನೀಡುತ್ತಿದ್ದಾರೆ. ದೂರವಾಣಿ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುವಂತೆ ಒತ್ತಾಯಿಸುತ್ತಿದ್ದರು ಎಂದು 15-17 ವರ್ಷದೊಳಗಿನ ವಿದ್ಯಾರ್ಥಿನಿಯರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು.
ಶಾಲೆಯ ಸಮಿತಿಯು ದೂರಿನ ಬಗ್ಗೆ ತನಿಖೆ ನಡೆಸಿ ಜೈಪುರದ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಪ್ರಾದೇಶಿಕ ಕಚೇರಿಗೆ ವರದಿ ಕಳುಹಿಸಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಕಚೇರಿಯು ಶಾಲಾ ಸಮಿತಿಯ ವರದಿಯೊಂದಿಗೆ ಪತ್ರವನ್ನು ಪೊಲೀಸರಿಗೆ ಕಳುಹಿಸಿದೆ.