ಜೈಪುರ್: ಇಂದು ನಡೆದ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಎಲ್ಲಾ ಸಚಿವರ ರಾಜೀನಾಮೆ ಪಡೆದುಕೊಂಡಿದ್ದಾರೆ.
ಸಿಎಂ ಅಶೋಕ್ ಗೆಹ್ಲೋಟ್ ಎಲ್ಲ ಸಚಿವರಿಂದಲೇ ರಾಜೀನಾಮೆ ಪಡೆದಿದ್ದು, ನಾಳೆ ಪ್ರದೇಶ ಕಾಂಗ್ರೆಸ್ ಸಮಿತಿ ಸಭೆ ನಿಗದಿಯಾಗಿದೆ. ತಮ್ಮ ನಿವಾಸದಲ್ಲಿ ಇಂದು ಸಚಿವರ ಸಭೆ ನಡೆಸಿದ ನಂತರ ಸಿಎಂ ಎಲ್ಲರಿಂದ ರಾಜೀನಾಮೆ ಪಡೆದುಕೊಂಡಿದ್ದಾರೆ.
ನಾಳೆ ಸಚಿವ ಸಂಪುಟವನ್ನು ಪುನಾರಚನೆ ಮಾಡಲಿದ್ದಾರೆ. ರಾಜಭವನದಲ್ಲಿ ಭಾನುವಾರ ಪ್ರಮಾಣ ವಚನ ಸಮಾರಂಭ ನಡೆಯುವ ಸಾಧ್ಯತೆ ಇದೆ. ಕೆಲವು ಸಚಿವರನ್ನು ಪಕ್ಷದ ಸಂಘಟನೆಗೆ ಬಳಸಿಕೊಳ್ಳಲಾಗುತ್ತದೆ. ಸಂಪುಟಕ್ಕೆ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಸಿಎಂಗೆ ಎಲ್ಲ ಸಚಿವರು ರಾಜೀನಾಮೆ ನೀಡಿರುವುದಾಗಿ ಸಾರಿಗೆ ಇಲಾಖೆ ಉಸ್ತುವಾರಿ ವಹಿಸಿದ್ದ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಶುಕ್ರವಾರವಷ್ಟೇ ಗೋವಿಂದ್ ಸಿಂಗ್ ದೋತ್ಸ್ರಾ, ಹರೀಶ್ ಚೌಧರಿ ಮತ್ತು ರಘು ಶರ್ಮಾ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಲಿಖಿತವಾಗಿ ರಾಜೀನಾಮೆ ನೀಡಿದ್ದರು.
ಪೈಲಟ್ ಬೆಂಬಲಿಗರಿಗೆ ಸರ್ಕಾರದಲ್ಲಿ ಅವಕಾಶ ಕಲ್ಪಿಸುವಂತೆ ಬೇಡಿಕೆ ಇದ್ದು, ಕಳೆದ ಹಲವು ತಿಂಗಳುಗಳಿಂದ ಸಚಿವ ಸಂಪುಟ ಪುನಾರಚನೆಯ ಕೂಗು ಕೇಳಿ ಬರುತ್ತಿದೆ. ಈಗ ಕಾಲ ಕೂಡಿ ಬಂದಿದ್ದು, ಕಾಂಗ್ರೆಸ್ ಶಾಸಕರಲ್ಲದೆ, ಸರ್ಕಾರವನ್ನು ಬೆಂಬಲಿಸುವ ಪಕ್ಷೇತರ ಶಾಸಕರು ಮತ್ತು ಬಿಎಸ್‌ಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡ ಶಾಸಕರು ಕೂಡ ಹೊಸ ಸಂಪುಟದಲ್ಲಿ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.