ಜೈಪುರ್: ಜೈಪುರದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ 15 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಸಂಪುಟವನ್ನು ಪುನರ್ರಚಿಸುತ್ತಿದ್ದಂತೆ ನಾಲ್ವರು ಹಾಲಿ ಸಚಿವರು ಸೇರಿದಂತೆ 15 ಸಚಿವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲರ ನಿವಾಸದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ರಾಜ್ಯಪಾಲ ಕಲ್ ರಾಜ್ ಮಿಶ್ರಾ ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮೊದಲು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಟ್ವೀಟ್ ಮಾಡಿದ್ದು, 2023 ರ ಚುನಾವಣೆಯಲ್ಲಿ ಗೆಲ್ಲಲು ಪಕ್ಷವು ಒಟ್ಟಾಗಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಬಹುನಿರೀಕ್ಷಿತ ಸಂಪುಟ ವಿಸ್ತರಣೆಯಲ್ಲಿ 11 ಕ್ಯಾಬಿನೆಟ್ ಮತ್ತು ನಾಲ್ವರು ರಾಜ್ಯ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಹೇಮರಾಮ್ ಚೌಧರಿ, ಮಹೇಂದ್ರಜೀತ್ ಸಿಂಗ್ ಮಾಳವಿಯಾ, ರಾಮ್‌ಲಾಲ್ ಜಾಟ್, ಮಹೇಶ್ ಜೋಶಿ, ಗೋವಿಂದರಾಮ್ ಮೇಘವಾಲ್ ಮತ್ತು ಶಕುಂತ್ಲಾ ರಾವತ್ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜಾಹಿದಾ, ಬ್ರಿಜೇಂದ್ರ ಸಿಂಗ್ ಓಲಾ, ರಾಜೇಂದ್ರ ಗುಧಾ ಮತ್ತು ಮುರಾರಿ ಲಾಲ್ ಮೀನಾ ಅವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಸ್ಥಾನದ ಮಂತ್ರಿ ಮಂಡಲ ಈಗ ಮುಖ್ಯಮಂತ್ರಿಯನ್ನು ಹೊರತುಪಡಿಸಿ 19 ಕ್ಯಾಬಿನೆಟ್ ಮಂತ್ರಿಗಳನ್ನು ಮತ್ತು 10 ರಾಜ್ಯ ಸಚಿವರನ್ನು ಹೊಂದಿದೆ.