ರಾಜಸ್ಥಾನದಲ್ಲಿ ನಡೆದ ಮದುವೆಯೊಂದರಲ್ಲಿ ಗಂಡಿನ ಮನೆಯವರಿಗೆ ಹೆಣ್ಣಿನ ಮನೆಯವರು ಭಾರೀ ಮೊತ್ತದ ನಗದು ಹಾಗೂ ದುಬಾರಿ ಉಡುಗೊರೆಗಳನ್ನು ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಹೆಣ್ಣಿನ ಸೋದರ ಮಾವಂದಿರು ತಮ್ಮ ಸಹೋದರಿಯ ಪುತ್ರಿಗೆ ಮೂರು ಕೋಟಿ ರೂಪಾಯಿ ಮೌಲ್ಯದ ಉಡುಗೊರೆ ನೀಡುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ.
81 ಲಕ್ಷ ರೂ. ನಗದು, ನಿವೇಶನದ ಪತ್ರಗಳು, ಟ್ರಾಕ್ಟರ್ ಹಾಗೂ ಮದುಮಗಳಿಗೆ ಅಪಾರ ಪ್ರಮಾಣದಲ್ಲಿ ಒಡವೆಗಳನ್ನು ಕುಟುಂಬಸ್ಥರು ಮದುವೆ ಮನೆಗೆ ತಂದಿದ್ದಾಗಿ ವರದಿಗಳು ತಿಳಿಸುತ್ತಿವೆ.
ಮಾಯ್ರಾ ಎಂಬ ಸಾಂಪ್ರದಾಯಿಕ ಉಡುಗೊರೆ ನೀಡುವ ಸಮಾರಂಭದ ಭಾಗವಾಗಿ ಈ ಉಡುಗೊರೆಗಳನ್ನು ನೀಡಲಾಗಿದೆ. ಘೇವಾರಿ ದೇವಿ ಹಾಗೂ ಭನ್ವರ್‌ಲಾಲ್ ಪೊಟಾಲಿಯಾ ಎಂಬುವವರ ಪುತ್ರಿ ಅನುಶ್ಕಾರ ವಿವಾಹವನ್ನು ಬುಧವಾರ ಆಯೋಜಿಸಲಾಗಿತ್ತು. ಈ ವೇಳೆ ಅನುಶ್ಕಾರ ತಾಯಿಯ ಸಹೋದರರಾದ ಹರೇಂದ್ರ, ರಾಜೇಂದ್ರ ಹಾಗೂ ರಾಮೇಶ್ವರ ಈ ಸಂಪ್ರದಾಯವನ್ನು ನಡೆಸಿಕೊಟ್ಟಿದ್ದಾರೆ.
ವಿಡಿಯೋ ತುಣುಕನ್ನು ನೋಡಿದ ನೆಟ್ಟಿಗರು, “ಡೌರಿ ಅಥವಾ ವರದಕ್ಷಿಣಿಗಳಿಗೆ ಹೋಲಿಸಿದಲ್ಲಿ ಮಾಯ್ರಾ ಹೇಗೆ ಭಿನ್ನವಾಗಿದೆ? ಅದನ್ನು ನೀಡುತ್ತಿರುವ ರೀತಿ ಮಾತ್ರ ಭಿನ್ನವಾದಂತೆ ತೋರುತ್ತಿದೆ,” ಎಂಬರ್ಥದಲ್ಲಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
“ವರದಕ್ಷಿಣೆಯನ್ನು ಬಲವಂತದಿಂದ ಪಡೆಯಲಾಗುತ್ತದೆ. ಆದರೆ ಮಾಯ್ರಾ ವಿಚಾರದಲ್ಲಿ ಇಂಥದ್ದೆಲ್ಲಾ ಇಲ್ಲ. ಬದಲಾಗಿ ಸ್ವಇಚ್ಛೆಯಿಂದ ಕೊಡಲಾಗುತ್ತದೆ,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮೂಲಕ ವರದಕ್ಷಿಣೆ ಹಾಗೂ ಮಾಯ್ರಾಗಳ ನಡುವಿನ ವ್ಯತ್ಯಾಸವನ್ನು ಬಿಡಿಸಿ ಹೇಳಿದ್ದಾರೆ.