ರಾಜಸ್ಥಾನದ ರಾಜಸಮಂದ್ ಬಿಜೆಪಿ ಶಾಸಕ ಕಿರಣ್ ಮಹೇಶ್ವರಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಗುರುಗ್ರಾಮ್ ನ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಅವರು ನಿಧನರಾಗಿದ್ದಾರೆ.
ಕಳೆದ ತಿಂಗಳು ಕೊರೋನಾ ಪಾಸಿಟಿವ್ ವರದಿ ಬಂದಿದ್ದ ನಂತರದಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ನವೆಂಬರ್ ಮೊದಲ ವಾರ ಅವರು ಗುರುಗ್ರಾಮ್ ನ ಮೇದಾಂತ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ರಾತ್ರಿ ನಿಧನರಾಗಿದ್ದಾರೆ.
ರಾಜಸ್ಥಾನದ ಉದಯಪುರ ಕ್ಷೇತ್ರದಿಂದ 2006 ರಿಂದ 2009 ರವರೆಗೆ 14ನೇ ಲೋಕಸಭೆ ಸದಸ್ಯರಾಗಿದ್ದರು. ಕೋಟಾ ಉತ್ತರ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಗೆ ಉಸ್ತುವಾರಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು.
ಕಿರಣ್ ಮಹೇಶ್ವರಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ರಾಜ್ಯದ ಪ್ರಗತಿಗೆ, ಬಡವರ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ ಎಂದು ಸ್ಮರಿಸಿದ್ದಾರೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಕೂಡ ಸಂತಾಪ ಸೂಚಿಸಿದ್ದು, ಕಿರಣ್ ಮಹೇಶ್ವರಿ ಅವರು ತಮ್ಮ ಜೀವನವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದರು. ಅವರ ಸಾವು ನನಗೆ ವೈಯಕ್ತಿಕವಾಗಿ ನಷ್ಟವನ್ನು ಉಂಟು ಮಾಡಿದೆ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ಕಿರಣ್ ಮಹೇಶ್ವರಿ ಅವರೊಂದಿಗೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ದೀರ್ಘಕಾಲ ಕೆಲಸ ಮಾಡಿದ್ದೇನೆ ಎಂದು ಕೋಟಾ ಲೋಕಸಭೆ ಸದಸ್ಯರೂ ಆಗಿರುವ ಓಂ ಬಿರ್ಲಾ ಹೇಳಿದ್ದಾರೆ.