ಜೈಪುರ: ರಾಜಸ್ಥಾನದ ಕೊಟಪುಟ್ಲಿ ಜಿಲ್ಲೆಯಲ್ಲಿ ಸತತ 10 ದಿನಗಳ ಕಾರ್ಯಾಚರಣೆ ನಡೆಸಿ ಜೀವಂತವಾಗಿ ರಕ್ಷಿಸಲಾಗಿದ್ದ ಮೂರು ವರ್ಷದ ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.
ಡಿಸೆಂಬರ್ 23ರಂದು ಹೊಲದಲ್ಲಿ ಆಟವಾಡುತ್ತಿದ್ದ ವೇಳೆ ಮೂರು ವರ್ಷದ ಪುಟಾಣಿ ಚೇತನಾ 150 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್. ತಂಡಗಳು ಹಾಗೂ ತಜ್ಞರು ಸೇರಿದಂತೆ ಜಿಲ್ಲಾಡಳಿತದಿಂದ ಸತತ 160 ಗಂಟೆಗಳ ಯಶಸ್ವಿ ಕಾರ್ಯಾಚರಣೆ ನಡೆಸಿ ಮಗುವನ್ನು ಜೀವಂತವಾಗಿ ಹೊರತೆಗೆಯಲಾಗಿತ್ತು.
ಆದರೆ, 10 ದಿನಗಳ ಕಾಲ ನಡೆದ ಯಶಸ್ವಿ ಕಾರ್ಯಾಚರಣೆ ದುರಂತದಲ್ಲಿ ಅಂತ್ಯವಾಗಿದೆ. ಮಗು ಬಿದ್ದಿದ್ದ ಕೊಳವೆ ಬಾವಿಗೆ ಸಮಾನಾಂತರವಾಗಿ ಗುಂಡಿ ತೆಗೆದು ಮಗುವನ್ನು ರಕ್ಷಿಸಲು ರಕ್ಷಣಾ ಪಡೆಗಳ ತಂಡ ಪ್ರಯತ್ನ ನಡೆಸಿದ್ದು, ಮಧ್ಯಮಧ್ಯ ಬೃಹತ್ ಬಂಡೆಗಳು ಎದುರಾದ ಕಾರಣ ಕಾರ್ಯಾಚರಣೆ ವಿಳಂಬವಾಗಿತ್ತು. ಹಗಲು ರಾತ್ರಿ ಎನ್ನದೆ ಸತತ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡಗಳು ಬುಧವಾರ 10ನೇ ದಿನದ ಕಾರ್ಯಾಚರಣೆಯಲ್ಲಿ 150 ಅಡಿ ಆಳದಲ್ಲಿ ಬಿದ್ದಿದ್ದ ಮಗುವನ್ನು ಜೀವಂತವಾಗಿ ರಕ್ಷಿಸಿದ್ದವು. ಅನ್ನ ನೀರಿಲ್ಲದೆ ನಿತ್ರಾಣಗೊಂಡಿದ್ದ ಮಗು ಆಸ್ಪತ್ರೆಗೆ ದಾಖಲಿಸಿದ ನಂತರ ಮೃತಪಟ್ಟಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.