ಭೋಪಾಲ್: ಬಲವಂತವಾಗಿ ಮತಾಂತರ ಮಾಡಿರುವ ಆರೋಪದ ಮೇಲೆ ಕ್ರಿಶ್ಚಿಯನ್ ಪಾದ್ರಿಯನ್ನು ಬಲಪಂಥೀಯ ಗುಂಪು ಪೊಲೀಸ್ ಠಾಣೆಯೊಳಗೇ ಥಳಿಸಿರುವ ಘಟನೆ ರಾಯ್ಪುರದ ಪುರಾಣಿ ಬಸ್ತಿ ಠಾಣೆಯಲ್ಲಿ ನಡೆದಿದೆ.
ಗುಂಪಿನ ಸದಸ್ಯರು ಹಾಗೂ ಪಾದ್ರಿಯನ್ನು ಠಾಣೆಗೆ ವಿಚಾರಣೆಗಾಗಿ ಕರೆಸಲಾಗಿತ್ತು. ಈ ವೇಳೆ ತೀವ್ರ ವಾದ-ವಿವಾದ ನಡೆದಿದೆ. ಈ ವೇಳೆ ಕೋಪಗೊಂಡ ಗುಂಪು ಪಾದ್ರಿಯನ್ನು ಥಳಿಸಿದೆ. ಭಟಗಾಂವ್ ಪ್ರದೇಶದಲ್ಲಿ ಬಲವಂತವಾಗಿ ಧಾರ್ಮಿಕ ಮತಾಂತರ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು. ಬಳಿಕ ಪೊಲೀಸ್ ಠಾಣೆಗೆ ತೆರಳಿದ ಕೆಲ ಹಿಂದೂ ನಾಯಕರು ಬಲವಂತವಾಗಿ ಮತಾಂತರ ನಡೆಸುವವರ ವಿರುದ್ಧ ಘೇರಾವ್ ಹಾಕಿದರು.
ಕ್ರಿಶ್ಚಿಯನ್ ಸಮುದಾಯದ ಇತರ ಕೆಲವು ಸದಸ್ಯರೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ ಪಾದ್ರಿ ಜೊತೆ, ಗುಂಪಿನ ಸದಸ್ಯರು ಬಿರುಸಿನ ಮಾತುಕತೆ ನಡೆಸಿದರು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು, ಕೋಪಗೊಂಡ ಬಲಪಂಥೀಯ ಗುಂಪು ಪಾದ್ರಿ ಮೇಲೆ ಹಲ್ಲೆ ನಡೆಸಿದೆ. ಪಾದ್ರಿಗೆ ಚಪ್ಪಲಿ ಹಾಗೂ ಶೂಗಳಿಂದ ಹೊಡೆದಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ಇದೀಗ ಹಲ್ಲೆ ಮಾಡಿದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.