ಬೆಂಗಳೂರು: ‘ಮ್ಯಾಂದೊಸ್’ ಚಂಡಮಾರುತ ಪರಿಣಾಮ ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ.
ರಾಜ್ಯದ ಮಲೆನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡು, ಆಂಧ್ರ ಕರಾವಳಿಯಲ್ಲಿ ಚಂಡಮಾರುತದ ಅಬ್ಬರ ಕಡಿಮೆಯಾಗಿದೆ. ಇದರ ಜೊತೆಗೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ದಕ್ಷಿಣ ಅಂಡಮಾನ್ ಭಾಗದಲ್ಲಿ ಚಂಡಮಾರುತ ಸೃಷ್ಟಿಯಾಗಿದ್ದು, ಡಿಸೆಂಬರ್ 13 ಅಥವಾ 14ರ ವೇಳೆಗೆ ಪೂರ್ವ ಕರಾವಳಿಗೆ ಅಪ್ಪಳಿಸಲಿದೆ. ಇದರಿಂದ ತಮಿಳುನಾಡು, ಕರ್ನಾಟಕ ಅಂಡಮಾನ್ ಮೇಲೆ ಪ್ರಭಾವ ಉಂಟಾಗುವುದು ಎಂದು ಹೇಳಲಾಗಿದೆ.
‘ಮ್ಯಾಂದೊಸ್’ ಚಂಡಮಾರುತ ಪರಿಣಾಮ ನಿರಂತರ ಮಳೆಯಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಬೆಳೆಗಳು ಹಾನಗೀಡಾಗಿವೆ. ರಾಗಿ, ಅವರೆ, ತೊಗರಿ, ಮಾವು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಕಟಾವಿಗೆ ಬಂದಿದ್ದ ಶೇಕಡ 30ರಷ್ಟು ರಾಗಿ ಬೆಳೆ ಸಂಪೂರ್ಣ ಹಾನಿಯಾಗಿದೆ. ನಿರಂತರ ಮಳೆಯಿಂದಾಗಿ ಅವರೆ, ತೊಗರಿ ಹೂವು ನೆಲಕ್ಕುದುರಿವೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಾನಿಯಾಗುವ ಭೀತಿ ಎದುರಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಂಡಮಾರುತದಿಂದ ನಿರಂತರ ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣವಿದ್ದು, ಶೀತ ಗಾಳಿ, ಥಂಡಿ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಮುಂಜಾಗ್ರತೆ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಇಂದು ರಜೆ ಘೋಷಣೆ ಮಾಡಿದ್ದಾರೆ. ಕೋಲಾರ ಜಿಲ್ಲೆಯಲ್ಲೂ ಶಾಲೆ, ಕಾಲೇಜ್ ಗಳಿಗೆ ರಜೆ ನೀಡಲಾಗಿದೆ. ಮುಂದಿನ ಸರ್ಕಾರಿ ರಜೆ ದಿನ ಶಾಲೆ ನಡೆಸುವಂತೆ ಡಿಡಿಪಿಐ ಸೂಚನೆ ನೀಡಿದ್ದಾರೆ.