
ಬೆಂಗಳೂರು: ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಬದಲಿಗೆ ನೀಡುತ್ತಿದ್ದ ಹಣ ಕಳೆದ 5 ತಿಂಗಳಿಂದ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ.
ಬಿಪಿಎಲ್ ಕಾರ್ಡ್ ನ ಗರಿಷ್ಠ ನಾಲ್ಕು ಸಂಖ್ಯೆಯ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಲಾಗಿತ್ತು. ಅಕ್ಕಿ ಪೂರೈಕೆಯಾಗದ ಕಾರಣ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ನೀಡಿ ಉಳಿದ ಐದು ಕೆಜಿ ಅಕ್ಕಿ ಬದಲು ಹಣ ನೀಡಲಾಗುತ್ತಿದೆ.
ನಾಲ್ವರು ಸದಸ್ಯರು ಇರುವ ಬಿಪಿಎಲ್ ಕುಟುಂಬಕ್ಕೆ 40 ಕೆಜಿ ಅಕ್ಕಿ ನೀಡುವ ಬದಲು 20 ಕೆಜಿ ಜೊತೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ 20 ಕೆಜಿಗೆ 680 ರೂ.ಗಳನ್ನು ನೀಡಲಾಗುತ್ತಿದೆ. ಈ ನಡುವೆ ಹಣದ ಬದಲಿಗೆ ಅಕ್ಕಿ ನೀಡುವುದಾಗಿ ಹೇಳಲಾಗಿದ್ದರೂ, ಅದು ಕಾರ್ಯರೂಪಕ್ಕೆ ಬಂದಿಲ್ಲ. ವಾಸ್ತವದಲ್ಲಿ ಕಳೆದ ಐದು ತಿಂಗಳಿಂದ ಹೆಚ್ಚುವರಿ ಅಕ್ಕಿಯನ್ನಾಗಲಿ, ಹಣವನ್ನಾಗಲಿ ನೀಡುತ್ತಿಲ್ಲ. ಇದರಿಂದಾಗಿ ಬಿಪಿಎಲ್ ಕಾರ್ಡ್ ದಾರರು ನ್ಯಾಯಬೆಲೆ ಅಂಗಡಿಯವರ ಬಳಿ ಜಗಳವಾಡುವಂತಾಗಿದೆ.
ಕೆಲವು ಜಿಲ್ಲೆಗಳಲ್ಲಿ ಈ ರೀತಿಯ ಗೊಂದಲ ಉಂಟಾಗಿದ್ದು, ಇದನ್ನು ಸರಿಪಡಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ ಗೃಹಲಕ್ಷ್ಮಿ ಯೋಜನೆಯ ಮಾಸಿಕ ಪ್ರೋತ್ಸಾಹ ಧನ ಕೂಡ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಹೆಚ್ಚುವರಿಯ ಅಕ್ಕಿಯ ಹಣ ಕೂಡ ಬಿಡುಗಡೆಯಾಗಿಲ್ಲ. ಇದನ್ನೇ ನಂಬಿಕೊಂಡವರಿಗೆ ಸಂಕಷ್ಟ ಎದುರಾಗಿದೆ ಎಂದು ಹೇಳಲಾಗಿದೆ.