ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ 6 ಗಂಟೆಗಳ ಕಾಲ ಮಳೆ ಸುರಿದಿದೆ. ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಅನೇಕ ಪ್ರದೇಶಗಳು ನೀರಿನಿಂದ ಆವೃತವಾಗಿವೆ. ಅದ್ರಲ್ಲಿ ಹೊಸ ಸಂಸತ್ ಭವನ ಕೂಡ ಸೇರಿದೆ. ಹೊಸ ಸಂಸತ್ ಭವನ ಸೋರುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.
ಈ ವಿಡಿಯೋವನ್ನು ತಮಿಳುನಾಡಿನ ಕಾಂಗ್ರೆಸ್ ಸಂಸದ ಮಾಣಿಕ್ಕಂ ಠಾಗೋರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ಅವರು, ಹೊರಗೆ ಪೇಪರ್ ಸೋರಿಕೆ, ಒಳಗೆ ನೀರು ಸೋರಿಕೆ ಎಂದು ಶೀರ್ಷಿಕೆ ಹಾಕಿದ್ದಾರೆ.
1200 ಕೋಟಿ ಖರ್ಚು ಮಾಡಿ ನಿರ್ಮಿಸಿರುವ ನೂತನ ಸಂಸತ್ ಭವನದ ಒಳಗೆ ನೀರು ಬೀಳ್ತಿದೆ. ಬಕೆಟ್ ಇಟ್ಟು ನೀರು ಕೆಳಗೆ ಬೀಳದಂತೆ ತಡೆಯಲಾಗ್ತಿದೆ. ನಿರ್ಮಾಣ ಪೂರ್ಣಗೊಂಡ ಕೇವಲ ಒಂದು ವರ್ಷದಲ್ಲಿ ಕಟ್ಟಡದ ಸ್ಥಿತಿ ಹೀಗಾಗಿದೆ. ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಇದೇ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರಕ್ಕೆ ಒಂದಿಷ್ಟು ಪ್ರಶ್ನೆಗಳನ್ನು ಇಟ್ಟಿದ್ದಾರೆ. ಈ ಹೊಸ ಸಂಸತ್ತಿಗಿಂತ ಹಳೆಯ ಸಂಸತ್ತು ಉತ್ತಮವಾಗಿದೆ ಎಂದು ಅವರು ಬರೆದಿದ್ದಾರೆ.