ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇರುವುದರಿಂದ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಚುರುಕಾಗಿದೆ. ಭಾನುವಾರ ಭಾರಿ ಮಳೆ ಆಗುವ ಸಂಭವವಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ 11 ರಿಂದ 20 ಸೆಂ.ಮೀ. ವರೆಗೆ ಮಳೆಯಾಗುವ ಸಂಭವವಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. 6- 11 ಸೆಂ.ಮೀ. ವರೆಗೆ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್ 22 ರಂದು ಸೋಮವಾರ ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾವಿ, ಹಾವೇರಿ, ಗದಗ, ರಾಯಚೂರು, ಕೊಪ್ಪಳ, ಕಲಬುರಗಿ, ಚಿಕ್ಕಮಗಳೂರು, ಯಾದಗಿರಿ, ವಿಜಯಪುರ, ಮೈಸೂರು, ಮಂಡ್ಯ, ಚಿತ್ರದುರ್ಗ, ಶಿವಮೊಗ್ಗ, ತುಮಕೂರಿನಲ್ಲಿ 6-11 ಸೆಂ.ಮೀ. ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕರಾವಳಿಯಲ್ಲಿ 30 ರಿಂದ 40 ಕಿ.ಮೀ., ಉತ್ತರ ಒಳನಾಡಿನಲ್ಲಿ 50 ರಿಂದ 60 ಕಿ,ಮೀ. ವೇಗದ ಗಾಳಿ ಬೀಸಲಿದೆ ಎಂದು ಹೇಳಲಾಗಿದೆ.