ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರಗೊಂಡ ಪರಿಣಾಮ ರಾಜ್ಯದ ವಿವಿಧೆಡೆ ತುಂತುರು ಮಳೆಯಾಗುತ್ತಿದೆ. ಜನವರಿ 9 ರವರೆಗೆ ರಾಜ್ಯದ ಅನೇಕ ಭಾಗದಲ್ಲಿ ಮೋಡಕವಿದ ವಾತಾವರಣ ಇರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜನವರಿ 7 ರಂದು ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಭಾಗದ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ 64.5 ಮಿಲಿಮೀಟರ್ ನಿಂದ 115 ಮಿಲಿಮೀಟರ್ ವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಜನವರಿ 9 ರ ವರೆಗೆ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು, ಚದುರಿದಂತೆ ತುಂತುರು ಮಳೆಯಾಗಲಿದೆ. ಜನವರಿ 8 ರಂದು ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನ ಅನೇಕ ಕಡೆ ಮೋಡ ಕವಿದ ಮತ್ತು ಚಳಿಯ ವಾತಾವರಣವಿರುತ್ತದೆ. ಇದರೊಂದಿಗೆ ತುಂತುರು ಮಳೆ ಆಗುತ್ತದೆ ಎಂದು ಹೇಳಲಾಗಿದೆ.