ಬೆಂಗಳೂರು: ಬೆಂಗಳೂರಿನಲ್ಲಿ ಧಾರಾಕಾರ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮರದ ಜೊತೆಗೆ ವಿದ್ಯುತ್ ಕಂಬ ಮುರಿದು ಬಿದ್ದು ಆಟೋ ಜಖಂಗೊಂಡ ಘಟನೆ ವಸಂತನಗರದ ತಿಮ್ಮಯ್ಯ ರಸ್ತೆಯಲ್ಲಿ ನಡೆದಿದೆ. ರಸ್ತೆಯಲ್ಲಿ ತೆರಳುತ್ತಿದ್ದ ಆಟೋ ಮೇಲೆ ವಿದ್ಯುತ್ ಕಂಬ ಬಿದ್ದಿದೆ. ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿರುಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ರಸ್ತೆಗೆ ಮರ ಅಡ್ಡಲಾಗಿ ಬಿದ್ದ ಕಾರಣ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದ್ದು, ಬೆಸ್ಕಾಂ, ಬಿಬಿಎಂಪಿ ಸಿಬ್ಬಂದಿಯಿಂದ ಮರ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಬೆಂಗಳೂರಿನ ಕೆಆರ್ ಪುರಂ, ಕೆಂಗೇರಿ, ವೈಟ್ಫೀಲ್ಡ್, ಯಲಹಂಕ, ಬನ್ನೇರುಘಟ್ಟ ರಸ್ತೆ, ಬಿಡದಿ, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಬನಶಂಕರಿ, ಬಸವನಗುಡಿ, ತುಮಕೂರು ರಸ್ತೆ, ಕನಕಪುರ ರಸ್ತೆ, ಗಾಂಧಿನಗರ, ಜಯನಗರ, ವಿಜಯನಗರ, ಮಲ್ಲೇಶ್ವರಂ, ಎಂಜಿ ರೋಡ್, ಹಲಸೂರು ಮೊದಲಾದ ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ,
ಆರ್,ಟಿ ನಗರ ಜಯಮಹಲ್ ರಸ್ತೆ ಬಳಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿತ್ತು. ಭಾರಿ ಗಾಳಿ, ಗುಡುಗು, ಮಿಂಚು ಸಹಿತ ಮಳೆಯಾಗಿದ್ದರಿಂದ ಸವಾರರಿಗೆ ಕೆಲಕಾಲ ತೊಂದರೆ ಆಗಿತ್ತು.
ಚಿಕ್ಕಮಗಳೂರು ಜಿಲ್ಲೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಎನ್.ಆರ್. ಪುರ ತಾಲೂಕಿನ ಮಾಗುಂಡಿ ಗ್ರಾಮದ ಬಳಿ ರಸ್ತೆ ಹಲವು ಮರಗಳು ಬಿದ್ದು, ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ. ಹೊರನಾಡು, ಕಳಸ, ಕೊಟ್ಟಿಗೆಹಾರ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ರಸ್ತೆಗೆ ಬಿದ್ದಿರುವ ಮರಗಳನ್ನು ಸ್ಥಳೀಯರು ತೆರವು ಮಾಡಿದ್ದಾರೆ. ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಎನ್.ಆರ್. ಪುರ, ಕೊಪ್ಪ, ಕಳಸ ಭಾಗದಲ್ಲಿ ಧಾರಾಕಾರ ಮಳೆ ಆಗಿದೆ.