
ಬೆಂಗಳೂರು: ರಾಜ್ಯದ ವಿವಿಧೆಡೆ ಮಳೆಯಾಗಿದೆ. ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಹಾವೇರಿ, ಗದಗ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಯಲ್ಲಿ ಮಳೆಯಾಗಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಸಿಡಿಲು ಬಡಿದು ಮಹಿಳೆ ಮೃತಪಟ್ಟಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಳಿಕಟ್ಟೆಯಲ್ಲಿ ಮಳೆಯ ಅಬ್ಬರಕ್ಕೆ ಹತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ದಾವಣಗೆರೆ ಜಿಲ್ಲೆಯ ಹೆಬ್ಬಾಳ, ದೇವರಹಳ್ಳಿ ಸೇರಿ ಹಲವು ಕಡೆಗಳಲ್ಲಿ ಮಳೆಯಾಗಿದೆ. ಹೆಬ್ಬಾಳದಲ್ಲಿ ಗಾಳಿಗೆ ಮನೆಯ ಹೆಂಚುಗಳು ಹಾರಿ ಹೋಗಿದೆ.
ಬೆಳಗಾವಿಯಲ್ಲಿ ಭಾರಿ ಮಳೆಯ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿದೆ. ಒಂದು ಗಂಟೆಗೂ ಅಧಿಕ ಕಾಲ ಗುಡುಗು ಸಹಿತ ಮಳೆಯಾಗಿದೆ. ಭೋವಿ ಗಲ್ಲಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿತ್ತು.
ಕೊಪ್ಪಳ ಜಿಲ್ಲೆಯ ಕುಷ್ಟಗಿ ಸೇರಿ ಹಲವು ಕಡೆ ಮಳೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ತೀರ್ಥಹಳ್ಳಿ ಸೇರಿ ಹಲವು ಕಡೆ ಚದುರಿದ ಮಳೆಯದ ವರದಿಯಾಗಿದೆ. ಬಿರು ಬಿಸಿಲ ನಡುವೆ ಅಲ್ಲಲ್ಲಿ ಮಳೆಯಾಗಿರುವುದರಿಂದ ರೈತರಿಗೆ ಸಂತಸ ತಂದಿದೆ
ಇನ್ನು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟಿಸಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ, ಸಂಗಮೇಶ್ವರಪೇಟೆ, ಜೇನುಗದ್ದೆ, ಶಿರಗೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಭಾರಿ ಮಳೆಯಿಂದಾಗಿ ಶಿರಗೋಳದಲ್ಲಿ ಬೃಹತ್ ಅರಳಿ ಮರ ರಸ್ತೆಗೆ ಬಿದ್ದಿದೆ. ಸಂಗಮೇಶ್ವರ ಪೇಟೆಯಲ್ಲಿ ಶಾಲೆಯ ಕಾಂಪೌಂಡ್ ಮೇಲೆ ಮರ ಬಿದ್ದಿದೆ. ಗಾಳಿ ಸಹಿತ ಮಳೆ ಹಿನ್ನೆಲೆಯಲ್ಲಿ ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.