
ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ದುರ್ಬಲವಾಗಿರುವುದರಿಂದ ಬಿತ್ತನೆ ಕಾರ್ಯ ವಿಳಂಬವಾಗಿದೆ.
ಏಪ್ರಿಲ್ ನಲ್ಲಿ ಮಳೆ ಪ್ರಮಾಣ ಗಣನೀಯ ಕುಸಿತ ಕಂಡಿದ್ದು, ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಕಳೆದ ವರ್ಷ ಈ ವೇಳೆಗೆ ರಾಜ್ಯದಲ್ಲಿ 0.64 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಬಾರಿ 0.28 ಲಕ್ಷ ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.
ವಾಡಿಕೆಯಂತೆ ಏಪ್ರಿಲ್ ನಲ್ಲಿ ಸುಮಾರು 31 ಮಿಲಿ ಮೀಟರ್ ಮಳೆಯಾದರೆ ಮೇನಲ್ಲಿ 86 ಮಿಲಿ ಮೀಟರ್ ಮಳೆಯಾಗುತ್ತದೆ. ಪೂರ್ವ ಮುಂಗಾರು ಬಗ್ಗೆ ಇನ್ನೂ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ಪೂರ್ವ ಮುಂಗಾರಿನಲ್ಲಿ ಚಾಮರಾಜನಗರ, ಹಾಸನ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಹಲವೆಡೆ ಬಿತ್ತನೆ ಕಾರ್ಯ ನಡೆಯುತ್ತದೆ. ಕೃಷಿ ಇಲಾಖೆ ಬಿತ್ತನೆ ಬೀಜ, ಗೊಬ್ಬರ ಮಾರಾಟಕ್ಕೆ ರೈತ ಸಂಪರ್ಕ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದು, ಸಬ್ಸಿಡಿ ದರದಲ್ಲಿ ಬೀಜ, ಗೊಬ್ಬರ ವಿತರಿಸಲಾಗುತ್ತದೆ. ಆದರೆ, ಪೂರ್ವ ಮುಂಗಾರು ಮಳೆ ಕೊರತೆ ಕಾರಣ ಬಿತ್ತನೆ ಪ್ರಮಾಣ ಕುಸಿತ ಕಂಡಿದೆ.