ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿ ಬರ ಪರಿಸ್ಥಿತಿ ಎದುರಾಗಿದೆ. ಈ ವರ್ಷ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಹೇಳಲಾಗಿದೆ.
2023ರಲ್ಲಿ ಎಲ್ ನೀನೋ(ಸಮುದ್ರದಲ್ಲಿ ತಾಪಮಾನ ಹೆಚ್ಚಳ) ಪ್ರಭಾವದ ಕಾರಣ ಮಳೆ ಭಾರಿ ಕುಂಠಿತವಾಗಿತ್ತು. ಈ ವರ್ಷದ ಮಾರ್ಚ್ ವೇಳೆಗೆ ಎಲ್ ನೀನೋ ಪ್ರಭಾವ ಕಡಿಮೆಯಾಗಲಿದೆ. ಇದರಿಂದ ಉತ್ತಮ ಮುಂಗಾರು ಮಳೆಯಾಗುವ ಸಾಧ್ಯತೆ ಇದೆ. ವಾಡಿಕೆಯಷ್ಟು ಮಳೆ ಆಗುವುದರಲ್ಲಿ ಯಾವುದೇ ಆತಂಕ ಇಲ್ಲ ಎಂದು ಹೇಳಲಾಗಿದೆ.
ಮಾರ್ಚ್ ವೇಳೆಗೆ ಮಳೆಯ ಕುರಿತಾದ ಇನ್ನಷ್ಟು ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಹವಾಮಾನ ತಜ್ಞ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ. 2023ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ರಾಜ್ಯದಲ್ಲಿ ವಾಡಿಕೆಯ ಪ್ರಕಾರ 1153 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಕೇವಲ 872 ಮಿಲಿ ಮೀಟರ್ ಮಳೆಯಾಗಿದ್ದು, 19 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. ಅತಿ ಹೆಚ್ಚು ಮಳೆಯಾಗುವ ಕರಾವಳಿಯಲ್ಲಿ ಶೇಕಡ 19 ರಷ್ಟು, ಮಲೆನಾಡು ಭಾಗದ ಜಿಲ್ಲೆಗಳಲ್ಲಿ 35ರಷ್ಟು ಮಳೆ ಕೊರತೆ ಕಂಡು ಬಂದಿದೆ. ಜನವರಿ 2ರಿಂದ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.