ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವಡೆ ಮಳೆ ಅಬ್ಬರಿಸುತ್ತಿದ್ದು,ಬೆಂಗಳೂರು, ತುಮಕೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.
ಬೆಂಗಳೂರು ನಗರದ ಮೆಜೆಸ್ಟಿಕ್, ಶಾಂತಿನಗರ, ಬನಶಂಕರಿ, ಜೆ.ಪಿ.ನಗರ, ಕೋರಮಂಗಲ, ವಿಜಯನಗರ, ಜಯನಗರ, ರಾಜಾಜಿನಗರ, ಚಂದ್ರಾಲೇಔಟ್, ಹೆಬ್ಬಾಳ, ಸದಾಶಿವನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಮಳೆಯಿಂದಾಗಿ ಪರದಾಟ ನಡೆಸಿದರು. ಚಿತ್ರದುರ್ಗ ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ರಸ್ತೆಗಳು ಬಹುತೇಕ ಜಲಾವೃತಗೊಂಡಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತು.
ಕಲಬುರಗಿ, ಧಾರವಾಡ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಿದ್ದು, ವಿವಿಧೆಡೆ ಸುರಿದ ಧಾರಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಅಲ್ಲೂರ ಗ್ರಾಮದ ಸುರಿದ ಮಳೆಯಿಂದ ರಸ್ತೆಗಳೆಲ್ಲ ಜಲಾವೃತಗೊಂಡಿತು. ಹಾವೇರಿ ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಗುಡುಗು ಸಿಡಿಲು ಸಮೇತ ಕೆಲಕಾಲ ಭಾರೀ ಮಳೆಯಾಗಿದೆ. ಆದರೆ ಕಟಾವಿಗೆ ಬಂದ ಮೆಕ್ಕೆಜಜೋಳ ಹಾನಿಯಾಗುವ ಭಯದಲ್ಲಿ ರೈತರಿದ್ದಾರೆ.