ಜಿಮ್ ಗಳಲ್ಲಿ ಕಸರತ್ತು ಮಾಡುವಾಗಲೇ ಕುಸಿದು ಬಿದ್ದು ಅಥವಾ ರನ್ನಿಂಗ್ ರೇಸ್ ನಲ್ಲಿ ಓಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಆದರೆ, ಇಲ್ಲೊಂದು ಆಘಾತಕಾರಿ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯೊಬ್ಬರು ನೃತ್ಯ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಈ ಆಘಾತಕಾರಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರ ಪ್ರತೀಕ್ ದುವಾ ಎಂಬುವರು ಹಂಚಿಕೊಂಡಿದ್ದಾರೆ.
ಮಹಿಳೆಯರಿಬ್ಬರೊಂದಿಗೆ ತುಂಬಾ ಆನಂದದಿಂದ ಡಾನ್ಸ್ ಮಾಡುತ್ತಿದ್ದ ವ್ಯಕ್ತಿಯು ಪ್ರತಿಯೊಂದು ಕ್ಷಣವನ್ನು ಅನುಭವಿಸುತ್ತಿದ್ದರು. ಆದರೆ, ಇದ್ದಕ್ಕಿದ್ದಂತೆಯೇ ಡಾನ್ಸ್ ಮಾಡುವುದನ್ನು ನಿಲ್ಲಿಸಿದ ವ್ಯಕ್ತಿ ಪಕ್ಕಕ್ಕೆ ಹೋಗಿ ಕುಳಿತಿದ್ದಾರೆ. ಡಾನ್ಸ್ ಮಾಡುತ್ತಿದ್ದ ಮಹಿಳೆಯರು ವ್ಯಕ್ತಿಯು ವಿಶ್ರಾಂತಿ ತೆಗೆದುಕೊಳ್ಳಲು ಕುಳಿತಿರಬೇಕು ಎಂದು ಭಾವಿಸಿದ್ದಾರೆ.
ಆದರೆ, ಅರೆ ಕ್ಷಣದಲ್ಲೇ ಕುಸಿದು ಬಿದ್ದಿದ್ದಾರೆ. ಎಲ್ಲರೂ ಅವರತ್ತ ಧಾವಿಸಿ ಪ್ರಥಮ ಚಿಕಿತ್ಸೆ ನೀಡಲು ಮುಂದಾದರಾದರೂ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಈ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ನೆಟ್ಟಿಗರು, ಮಧ್ಯ ವಯಸ್ಸಿನ ವ್ಯಕ್ತಿಗೆ ಹೃದಯಾಘಾತ ಉಂಟಾಗಿದೆ. ಹೃದಯ ಬಡಿತ ಇದ್ದಕ್ಕಿದ್ದಂತೆ ನಿಂತರೆ ಕೆಲವೇ ನಿಮಿಷಗಳಲ್ಲಿ ಸಾವಿಗೆ ಕಾರಣವಾಗುತ್ತದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಮತ್ತೊಬ್ಬ ನೆಟ್ಟಿಗ, ಡ್ಯಾನ್ಸ್ ಅಥವಾ ಯಾವುದೇ ಸಮಾರಂಭದಲ್ಲಿ ಮ್ಯೂಸಿಕ್ ಸಿಸ್ಟಂನ ಸೌಂಡ್ ಮಿತಿಯಲ್ಲಿರಬೇಕು. ಅಧಿಕ ಸೌಂಡ್ ಇದ್ದರೆ ಅದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು, ಅಧಿಕ ಶಬ್ಧದಿಂದ ಅಧಿಕ ರಕ್ತದೊತ್ತಡ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದಿದ್ದಾರೆ.