ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಅನಿಶ್ಚಿತತೆ ಮುಂದುವರೆದಿದೆ. 25 ಜಿಲ್ಲೆಗಳಲ್ಲಿ ಮಳೆ ಕೊರತೆ ಕಂಡು ಬಂದಿದೆ. 187 ತಾಲೂಕುಗಳಲ್ಲಿ ಮಳೆ ಕುಂಠಿತವಾಗಿದೆ.
ಮುಂಗಾರು ವಿಳಂಬದಿಂದ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಈ ವೇಳೆಗಾಗಲೇ ಮಳೆ ಜೋರಾಗಿ ಕೆರೆಕಟ್ಟೆಗಳು ತುಂಬಬೇಕಿತ್ತು, ಕೃಷಿ ಚಟುವಟಿಕೆ ಚುರುಕುಗೊಂಡು ಬಿತ್ತನೆ ಕಾರ್ಯ ಪೂರ್ಣಗೊಳ್ಳುವ ಹಂತಕ್ಕೆ ಬರಬೇಕಿತ್ತು. ಆದರೆ, ಜೂನ್ ಮುಗಿದರೂ ಮಳೆಯ ಲಕ್ಷಣಗಳು ಕಂಡು ಬರುತ್ತಿಲ್ಲ.
ಬಿತ್ತನೆಗೆ ಜಮೀನು ಹದ ಮಾಡಲು ಕೂಡ ಮಳೆ ಬೇಕಾಗಿದೆ ಹತ್ತಿ, ಮೆಕ್ಕೆಜೋಳ ಬಿತ್ತನೆಗೆ ಹಿನ್ನಡೆಯಾಗಿದ್ದು, ಮುಂದಿನ ವಾರ ಮಳೆ ಬಂದರೆ ರಾಗಿ ಬಿತ್ತನೆ ಮಾಡಬಹುದು. ಇಲ್ಲದಿದ್ದರೆ ಬಿತ್ತನೆ ಮಾಡಲಾಗುವುದಿಲ್ಲ ಎನ್ನಲಾಗಿದೆ.
ರಾಜ್ಯದಲ್ಲಿ ಜೂನ್ 1ರಿಂದ 29 ರವರೆಗೆ 191 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, 81 ಮಿಲಿ ಮೀಟರ್ ಮಳೆಯಾಗಿದೆ. ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು, ಕೃಷಿ ಚಟುವಟಿಕೆ ಕುಂಠಿತಗೊಳ್ಳುವ ಭೀತಿ ಆವರಿಸಿದೆ.