
ಬೆಂಗಳೂರು: ಉತ್ತರ ಭಾರತದಲ್ಲಿ ದಾಖಲೆಯ ಬಿಸಿಲು, ಬಿಸಿ ಗಾಳಿಯಿಂದ ಜನ ತತ್ತರಿಸಿದ್ದು, ರಾಜ್ಯದ ಹಲವೆಡೆ ಭಾರಿ ಮಳೆ ಅವಾಂತರ ಸೃಷ್ಟಿಸಿದೆ.
ಭಾನುವಾರ ಗುಡುಗು ಸಿಡಿಲು ಸಹಿತ ಜೋರು ಮಳೆಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಗೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಬಿಡದಿಯಲ್ಲಿ ಸಿಡಿಲು ಬಡಿದು 10 ಕುರಿ, 6 ಮೇಕೆ ಸಾವನ್ನಪ್ಪಿವೆ.
ಮೈಸೂರು ಭಾಗದಲ್ಲಿ ಮಳೆ ಮುಂದುವರೆದಿದ್ದು, ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ವಳಲೆಕಟ್ಟೆಕೊಪ್ಪಲಿನಲ್ಲಿ ಸಿಡಿಲು ಬಡಿದು 53 ವರ್ಷದ ಮಾಸ್ತಮ್ಮ ಮೃತಪಟ್ಟಿದ್ದಾರೆ. ಕುಂಬಾರಕೊಪ್ಪಲು ಹಾಗೂ ಚಿನಕುರಳಿ ಗ್ರಾಮದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.
ಬೇಲೂರು ತಾಲ್ಲೂಕಿನ ಕೃಷ್ಣಾಪುರದಲ್ಲಿ ಸಿಡಿಲು ಬಡಿದು ರಂಗನಾಯಕ(79) ಮೃತಪಟ್ಟಿದ್ದಾರೆ. ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಅವರು ಸಾವನ್ನಪ್ಪಿದ್ದಾರೆ.
ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆ ತಂಪಿನ ಅನುಭವ ನೀಡಿದ್ದರೂ ಭಾರಿ ಮಳೆ, ಗುಡುಗು-ಸಿಡಿಲಿನ ಕಾರಣ ಜೀವಹಾನಿ ಸೇರಿ ಅಪಾರ ನಷ್ಟವುಂಟಾಗಿದೆ. ಮೈಸೂರು, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಚಾಮರಾಜನಗರ, ಚಿತ್ರದುರ್ಗ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ.
ಮುಂದಿನ ಮೂರುದಿನಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಕೊಪ್ಪಳ, ಯಾದಗಿರಿ, ಬೆಳಗಾವಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಮೇ 3 ಮತ್ತು 4ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮೇ 2ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎನ್ನಲಾಗಿದೆ.