ಬೆಂಗಳೂರು: ಕಳೆದ ವಾರದಿಂದ ರಾಜ್ಯದ ಬಹುತೇಕ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಜಾನುವಾರುಗಳು ಮೃತಪಟ್ಟಿವೆ. ಜೀವಹಾನಿ ಕೂಡ ಆಗಿದ್ದು, ಇನ್ನು ಮೂರು ದಿನಗಳ ಕಾಲ ರಾಜಧಾನಿ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀರಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣಕನ್ನಡ ಮತ್ತು ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ನಾಳೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಅದೇ ರೀತಿ, ಧಾರವಾಡ, ಬೆಳಗಾವಿ, ಹಾವೇರಿ, ಕೊಪ್ಪಳ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಕೂಡ ಹೆಚ್ಚಿನ ಮಳೆಯಾಗಲಿದೆ ಎಂದು ಹೇಳಲಾಗಿದೆ.