ಬೆಂಗಳೂರು: ರಾಜ್ಯದ 6 ಜಿಲ್ಲೆಗಳಲ್ಲಿ ಅಕಾಲಿಕ ಮಳೆಯ ಅಬ್ಬರ ಉಂಟಾಗಿದೆ. ಕೊಪ್ಪಳ, ಗದಗ, ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಸಿಡಿಲು ಬಡಿದು ಮೂವರು ಹಾಗೂ ಛಾವಣಿ ಕುಸಿದು ಇಬ್ಬರು ಮೃತಪಟ್ಟಿದ್ದಾರೆ.
ಗದಗ, ಕೊಪ್ಪಳ, ಕಲ್ಬುರ್ಗಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಶುಕ್ರವಾರ ಮಳೆಯಾಗಿದೆ. ಕೊಪ್ಪಳ, ಉತ್ತರ ಕನ್ನಡ, ಗದಗ ಜಿಲ್ಲೆಗಳಲ್ಲಿ ಭಾರಿ ಆಲಿಕಲ್ಲು ಸಹಿತ ಮಳೆಯಾಗಿ ಕೆಲವು ಕಡೆ ಬೇಸಿಗೆ ಬೆಳೆಗಳಿಗೆ ಭಾರೀ ಹಾನಿಯಾಗಿದೆ. ಕೊಪ್ಪಳ ಜಿಲ್ಲೆಯ ಕೊಪ್ಪಳ, ಕುಕನೂರು, ಗದಗ ಜಿಲ್ಲೆಯ ಹಲವು ಕಡೆ ಆಲಿಕಲ್ಲು ಸಹಿತ ಮಳೆಯ ಅಬ್ಬರದಿಂದ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
ಗದಗ ಜಿಲ್ಲೆಯಲ್ಲಿ ಸಿಡಿಲಿನ ಅಬ್ಬರಕ್ಕೆ ಇಬ್ಬರು ಮೃತಪಟ್ಟಿದ್ದಾರೆ. ಗದಗ ತಾಲೂಕಿನ ಲಿಂಗದಾಳದಲ್ಲಿ ಕುರಿ ಮೇಯಿಸಲು ಹೋಗಿದ್ದ ಶರಣಪ್ಪ(16), ದೇವೇಂದ್ರಪ್ಪ(16) ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲ್ಬುರ್ಗಿ ಜಿಲ್ಲೆ ಅಫಜಲಪುರ ತಾಲೂಕಿನ ಬಿಲ್ವಾಡ ಬಿ ಗ್ರಾಮದ ರೈತ ಬೋಗಪ್ಪ(60) ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಮಳೆಯಿಂದ ತೇವಗೊಂಡಿದ್ದ ಮನೆಯ ಛಾವಣಿ ಕುಸಿತು ಯಂಕೂಬಾಯಿ ಕುಲಕರ್ಣಿ(79), ಶಾರವ್ವ ಪತ್ತಾರ(58) ಮೃತಪಟ್ಟಿದ್ದಾರೆ.