ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಬಿಪರ್ ಜಾಯ್ ಚಂಡಮಾರುತ ಸೃಷ್ಟಿಯಾಗಿದ್ದು, ವೇಗ ವೃದ್ಧಿಸಿಕೊಳ್ಳುತ್ತಿದೆ. ಈ ಚಂಡಮಾರುತದ ಪರಿಣಾಮ ಮುಂಗಾರು ಆಗಮನ ಮತ್ತಷ್ಟು ವಿಳಂಬವಾಗಲಿದೆ.
ಗುಜರಾತ್ ನ ಪೋರಬಂದರ್ ನ ದಕ್ಷಿಣಕ್ಕೆ 10,60 ಕಿಲೋಮೀಟರ್, ಮುಂಬೈ ನೈರುತ್ಯಕ್ಕೆ 990 ಕಿಲೋಮೀಟರ್ ದೂರದಲ್ಲಿ ಸೈಕ್ಲೋನ್ ರೂಪುಗೊಂಡಿದ್ದು, ಅರಬ್ಬಿ ಸಮುದ್ರದ ದಕ್ಷಿಣದತ್ತ ಮಾರುತಗಳು ಚಲಿಸುತ್ತಿವೆ. ಕರ್ನಾಟಕದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿ ಚಂಡಮಾರುತ ರೂಪಗೊಂಡಿದ್ದು, ತೇವಾಂಶ ಭರಿತ ಮೋಡಗಳನ್ನು ಸೆಳೆಯುತ್ತಿದೆ. ಇದರಿಂದ ಮಾನ್ಸೂನ್ ವಿಳಂಬವಾಗಲಿದೆ ಎಂದು ಹೇಳಲಾಗಿದೆ.
ಚಂಡಮಾರುತದಿಂದಾಗಿ ರಾಜ್ಯದಲ್ಲಿ ಭಾರಿ ಮಳೆ ಆಗುವುದಿಲ್ಲ. ಆದರೆ ಸಮುದ್ರದಲ್ಲಿ ದೊಡ್ಡ ಗಾತ್ರದ ಅಲೆಗಳು ಏಳಲಿವೆ. ಮೀನುಗಾರರು ವಾಪಸ್ ಬರುವಂತೆ, ಸಮುದ್ರ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರುವಂತೆ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ಜೂನ್ 11 ರಿಂದ ರಾಜ್ಯದಲ್ಲಿ ಗುಡುಗು ಮಿಂಚು ಸಹಿತ ಮೂರು ದಿನ ಸಾಧಾರಣ ಮಳೆ ಆಗಲಿದೆ. ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಆಗಲಿದೆ. ಜೂನ್ 11 ರಿಂದ ಮುಂದಿನ ಎರಡು ದಿನ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಜೂನ್ 11ರಂದು ಚಿತ್ರದುರ್ಗ, ತುಮಕೂರು, ಜೂನ್ 12 ರಂದು ಕೋಲಾರದಲ್ಲಿ ಭಾರಿ ಮಳೆ ಆಗುವ ಸಾಧ್ಯತೆಯಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.