
ಬೆಂಗಳೂರು: ರಾಜ್ಯದ ಹಲವೆಡೆ ಅಕಾಲಿಕ ಮಳೆ ಮುಂದುವರೆದಿದೆ. ಫೆಬ್ರವರಿ 21 ರವರೆಗೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಮಲೆನಾಡು ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಹಲವೆಡೆ ಮಳೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿಯೂ ಗಾಳಿ ಸಹಿತ ಮಳೆಯಾಗುತ್ತಿದೆ. ಸಂಜೆ ನಂತರ ಮಳೆಯ ತೀವ್ರತೆ ಹೆಚ್ಚಾಗಲಿದೆ. ಫೆಬ್ರವರಿ 21 ರವರೆಗೆ ಬೆಂಗಳೂರಿನಲ್ಲಿ ಮಳೆಯಾಗಲಿದೆ.
ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ, ಬೆಂಗಳೂರು, ಧಾರವಾಡ, ಕಲ್ಬುರ್ಗಿ, ಹಾಸನ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಫೆಬ್ರವರಿ 21 ರವರೆಗೆ ತುಂತುರು, ಮತ್ತೆ ಕೆಲವೆಡೆ ಮಳೆಯ ತೀವ್ರತೆ ಹೆಚ್ಚಾಗಿ ಇರಲಿದೆ ಎಂದು ಹೇಳಲಾಗಿದೆ. ಅಕಾಲಿಕ ಮಳೆಯಿಂದಾಗಿ ರಾಜ್ಯದ ಅನೇಕ ಭಾಗದಲ್ಲಿ ಜನ ತತ್ತರಿಸುವಂತಾಗಿದೆ. ಚಿತ್ರದುರ್ಗದಲ್ಲಿ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಅನೇಕ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾದ ಕಾರಣ ಬೆಳೆಗಳಿಗೆ ಹಾನಿಯಾಗಿದೆ.