ಬೆಂಗಳೂರು: ಕಳೆದ ವಾರದಿಂದ ಭಾರಿ ಪ್ರಮಾಣದಲ್ಲಿ ಸುರಿದ ಮಳೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೊಯ್ಲಿಗೆ ಬಂದಿದ್ದ ಭತ್ತ, ಜೋಳ, ರಾಗಿ ಸೇರಿದಂತೆ ಪ್ರಮುಖ ಬೆಳೆಗಳು ಹಾಳಾಗಿದೆ. ಸುಮಾರು 21 ಜಿಲ್ಲೆಗಳಲ್ಲಿ ಕೊಯ್ಲಿಗೆ ಬಂದಿದ್ದ ಬೆಳೆ ಸಂಪೂರ್ಣ ನಾಶವಾಗಿದೆ.
ಅಕಾಲಿಕ ಮಳೆಯಿಂದ ಸುಮಾರು 2.33 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ರಾಜ್ಯದ ಬಹುತೇಕ ಭಾಗದಲ್ಲಿ ಸುರಿದ ಮಳೆಯಿಂದಾಗಿ ಗದ್ದೆ, ಹೊಲದಲ್ಲಿದ್ದ ಫಸಲು, ತರಕಾರಿ ಹಾಗೂ ತೋಟದ ಬೆಳೆಗಳಿಗೆ ಹಾನಿಯಾಗಿದೆ.
ಬೆಳೆಗಳು ಕೊಚ್ಚಿಹೋಗಿದ್ದು, ಕೆಲವೆಡೆ ನೀರು ನಿಂತು ಕೊಳೆತು ಹೋಗಿವೆ. ಮಳೆ ನೀರಿನಿಂದ ಬೆಳೆ ನೆಲಕ್ಕೆ ಬಿದ್ದಿವೆ. ರಾಗಿ, ಮೆಕ್ಕೆ ಜೋಳ, ಮೆಣಸಿನಕಾಯಿ ಮೊಳಕೆಯೊಡೆದಿವೆ. ತರಕಾರಿ, ಧಾನ್ಯ, ತೋಟದ ಬೆಳೆ ಸೇರಿ ಬಹುತೇಕ ಪ್ರದೇಶದಲ್ಲಿ ಬೆಳೆ ಹಾಳಾಗಿದೆ.
ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದ ಕಾಫಿ, 36000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ, 53000 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 47000 ಹೆಕ್ಟೇರ್ ನಲ್ಲಿ ಭತ್ತ, 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ, ಸುಮಾರು 20 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಸೇರಿದಂತೆ ಬೆಳೆಗಳು ಹಾಳಾಗಿದ್ದು, ಮೊದಲೇ ಸಂಕಷ್ಟದಲ್ಲಿದ್ದ ರೈತರು ಇನ್ನಷ್ಟು ತೊಂದರೆಗೆ ಸಿಲುಕಿದ್ದಾರೆ.