ಬೆಂಗಳೂರು: ಆರಂಭದಿಂದಲೂ ಕಣ್ಣ ಮುಚ್ಚಾಲೆ ಆಡುತ್ತಿರುವ ಮುಂಗಾರು ಮಳೆ ಈ ಬಾರಿ ಕೈ ಕೊಟ್ಟಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬೆಳೆದು ನಿಂತ ಬೆಳೆಗೆ ಅಗತ್ಯವಾಗಿದ್ದ ಮಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ರಾಜ್ಯದಲ್ಲಿ ಮಳೆ ಕೊರತೆ ನಡುವೆ ಹವಾಮಾನ ಇಲಾಖೆ ರೈತಾಪಿ ವರ್ಗಕ್ಕೆ ಸಿಹಿ ಸುದ್ದಿ ನೀಡಿದೆ. ಸೆಪ್ಟಂಬರ್ ನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಸೆಪ್ಟೆಂಬರ್ 2ರ ನಂತರ ರಾಜ್ಯವೂ ಸೇರಿದಂತೆ ದೇಶಾದ್ಯಂತ ಮುಂಗಾರು ಮಾರುತಗಳ ಸ್ಥಿತಿ ಸುಧಾರಿಸಲಿದ್ದು ಉತ್ತಮ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆಯ ಮುಖ್ಯಸ್ಥರಾದ ಮೃತ್ಯುಂಜಯ ಮೊಹಾಪಾತ್ರ ಮಾಹಿತಿ ನೀಡಿ, ಬಂಗಾಳ ಕೊಲ್ಲಿಯಲ್ಲಿ ಸೆಪ್ಟೆಂಬರ್ 2ರ ನಂತರ ಸೃಷ್ಟಿಯಾಗುವ ಮೇಲ್ಮೈಸುಳಿಗಾಳಿ ಪರಿಸ್ಥಿತಿ ನಂತರ ವಾಯುಭಾರ ಕುಸಿತವಾಗಿ ಮಾರ್ಪಡುವ ಸಾಧ್ಯತೆಯಿದ್ದು, ಇದರಿಂದ ದಕ್ಷಿಣ ಭಾರತ, ಮಧ್ಯ ಭಾರತ, ಪೂರ್ವ ಭಾರತದ ಹಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ಸಂಭವ ಇದೆ ಎಂದು ತಿಳಿಸಿದ್ದಾರೆ.
ಆಗಸ್ಟ್ ನಲ್ಲಿ ಅತ್ಯಂತ ಕಡಿಮೆ ಮಳೆ ಪ್ರಮಾಣ ದಾಖಲಾಗಿದೆ. 20 ದಿನ ಸತತವಾಗಿ ಮಳೆ ಬಾರದೆ ಶೇ. 33 ರಷ್ಟು ಮಳೆ ಕೊರತೆ ಆಗಿದೆ. ಸೆಪ್ಟೆಂಬರ್ 2ರಿಂದ ಉತ್ತಮ ಮಳೆ ಆಗಲಿದೆ ಎಂದು ಹೇಳಲಾಗಿದೆ.