ಬೆಂಗಳೂರು: ಭಾರಿ ಮಳೆಯಿಂದಾಗಿ ರಾಜ್ಯದ ಹಲವೆಡೆ ಅವಾಂತರ ಸೃಷ್ಠಿಯಾಗಿದ್ದು, ನಿವಾಸಿಗಳು ಪರದಾಡುವಂತಾಗಿದೆ.
ಭಾರಿ ಮಳೆಯಿಂದಾಗಿ ವೇದಾವತಿ ನದಿ ಉಕ್ಕಿ ಹರಿಯುತ್ತಿದ್ದು, ರಾರಾವಿ ಸೇತುವೆ ಮೇಲೆ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ರಾರಾವಿ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಸಂಪರ್ಕ ಕಡಿತಗೊಂಡಿದೆ. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದ ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ಬ್ಯಾರಿಕೇಡ್ ಹಾಕಿದ್ದಾರೆ.
ಮಲಪ್ರಭಾ ನದಿಯ ಪ್ರವಾಹದಿಂದಾಗಿ ಖ್ಯಾಡ, ಕಾತರಕಿ, ನೀರಲಗಿ ಗ್ರಾಮಗಳಿಗೆ ನೀರು ನುಗ್ಗಿದ್ದು, ಗ್ರಾಮಗಳು ಜಲಾವೃತಗೊಂಡು ನಿವಾಸಿಗಳು ಪರದಾಡುವಂತಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಖ್ಯಾಡ ಗ್ರಾಮದಲ್ಲಿ ಕೆಲವು ಮನೆಗಳು ಜಲಾವೃತ ಸಂಪೂರ್ಣ ಜಲಾವೃತಗೊಂಡಿವೆ. ವಾಸಿಸಲು ಯೋಗ್ಯವಲ್ಲದ ಚಿಕ್ಕ ಮನೆಗಳನ್ನು ನೀಡಲಾಗಿದ್ದು, ಇಂದಿಗೂ ಮೊದಲಿನ ಮನೆಗಳಲ್ಲಿ ಗ್ರಾಮಸ್ಥರು ವಾಸವಾಗಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಕೆರೆಗಳು ತುಂಬಿವೆ. ಹುಳಿಯಾರು ಕೆರೆ ತುಂಬಿ ಮನೆಗಳಿಗೆ ನೀರು ನುಗುವ ಭೀತಿ ಎದುರಾಗಿದೆ. ಕೆರೆ ಸಮೀಪದ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ಕೆರೆ ಇದಾಗಿದೆ. ದಿನೇದಿನೇ ಕೆರೆಗೆ ಹೆಚ್ಚು ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಆತಂಕ ಎದುರಾಗಿದ್ದು, ಮನೆಗಳನ್ನು ಖಾಲಿ ಮಾಡಲು ಪಟ್ಟಣ ಪಂಚಾಯಿತಿ ಸೂಚನೆ ನೀಡಿದೆ. ಮನೆಯ ಖಾಲಿ ಮಾಡಿ ಎಲ್ಲಿ ಹೋಗಬೇಕೆಂದು ನಿವಾಸಿಗಳು ಪ್ರಶ್ನಿಸಿದ್ದು, ಹುಳಿಯಾರು ಪಟ್ಟಣ ಪಂಚಾಯಿತಿ ಜಮಾಹಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಂದೂರು ಗ್ರಾಮದ ಬಳಿ ಭಾರಿ ಮಳೆಯಿಂದ ನೂರಾರು ಎಕರೆ ಬೆಳೆ ಜಲಾವೃತಗೊಂಡಿದೆ. ಶುಂಠಿ, ರಾಗಿ, ಎಲೆ ಕೋಸು ಬೆಳೆಗಳು ನಾಶವಾಗಿವೆ. ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.
ಭಾರಿ ಮಳೆಯಿಂದಾಗಿ ಆಯಿತೋಳು ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದಿದೆ. ಚಿತ್ರದುರ್ಗ ತಾಲೂಕಿನ ಆಯಿತೋಳು ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದು ಶಿವಣ್ಣ ಎಂಬುವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅದೃಷ್ಟ ವರ್ಷ ಶಿವಣ್ಣ ಮತ್ತು ಜ್ಯೋತಿ ದಂಪತಿ ಪಾರಾಗಿದ್ದಾರೆ.
ಮಲಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಹೆರೂರು ಕ್ರಾಸ್ -ಚಿನ್ನಾಪುರ ಸಂಪರ್ಕ ಸೇತುವೆ ಜಲಾವೃತಗೊಂಡು ಸಂಪರ್ಕ ಸ್ಥಗಿತಗೊಂಡಿದೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಚಿನ್ನಾಪುರ ಸೇತುವೆ ಜಲಾವೃತಗೊಂಡಿದೆ.