
ಬೆಂಗಳೂರು: ಬರ ಮತ್ತು ಬಿಸಿಲಿನ ಬೇಗೆಯಿಂದ ತತ್ತರಿಸಿದ ರಾಜ್ಯದ ಕೆಲವು ಭಾಗದಲ್ಲಿ ಮಾರ್ಚ್ ನಲ್ಲಿಯೇ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಬಸವನಹಳ್ಳಿ, ಐದಳ್ಳಿ, ಮಾಕೋಡು, ಹುಣಸೆಹಳ್ಳಿ ಮೊದಲಾದ ಕಡೆ ಮಳೆಯಾಗಿದೆ. ಬೀದರ್ ಜಿಲ್ಲೆಯ ಔರಾದ, ಬಾಲ್ಕಿ ತಾಲೂಕಿನ ಹಲವು ಕಡೆ ಭಾನುವಾರ ಮಳೆಯಾಗಿದೆ.
ಬೆಂಗಳೂರು ಸೇರಿದಂತೆ ಹಲವು ಕಡೆ ಇನ್ನೊಂದು ವಾರ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 24 ಗಂಟೆಯಲ್ಲಿ ಬೀದರ್, ಧಾರವಾಡ, ವಿಜಯಪುರ, ಕಲಬುರಗಿ ಸೇರಿದಂತೆ ವಿವಿಧೆಡೆ ಮಳೆ ಆಗಲಿದೆ. ಮಾರ್ಚ್ 20 ರಿಂದ 24ರ ವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್ ನಲ್ಲಿ ರಾಜ್ಯದಲ್ಲಿ ಗುಡುಗು ಮಿಂಚು ಸಹಿತ ಮಳೆ ಆಗಲಿದೆ. ಮೇ ಅಂತ್ಯದ ವೇಳೆಗೆ ಎಲ್ ನಿನೋ ಪ್ರಭಾವ ಕಡಿಮೆಯಾಗಿ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗುವ ಸಂಭವ ಇದೆ ಎಂದು ಹೇಳಲಾಗಿದೆ.