ಬೆಂಗಳೂರು: ಸೋಮವಾರ ರಾಜ್ಯದ ಕರಾವಳಿ ಪ್ರದೇಶ ಸೇರಿ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಬಿರುಸಾಗಿದ್ದು, ರೈತರಲ್ಲಿ ಆಶಾಭಾವನೆ ಮೂಡಿಸಿದೆ.
ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ಮುಂದಿನ ಐದು ದಿನಗಳ ಕಾಲ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು, ಕೊಪ್ಪಳ, ಬಾಗಲಕೋಟೆ, ರಾಮನಗರ, ಮೈಸೂರು ಜಿಲ್ಲೆಗಳ ಹಲವು ಜಿಲ್ಲೆ ಮಳೆಯಾಗಿದೆ.
ಉತ್ತರ ಕನ್ನಡದಲ್ಲಿ ಮುಂದಿನ 48 ಗಂಟೆ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂನ್ 27ರಿಂದ ಜುಲೈ 1ರವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉಳಿದ ಜಿಲ್ಲೆಗಳಲ್ಲಿ ಮೂರು ದಿನ ಸಾಧಾರಣ ಮಳೆ ಆಗಲಿದೆ. ಮುಂಗಾರು ರಾಜ್ಯಾದ್ಯಂತ ಆವರಿಸಿದ್ದರೂ ಹೇಳಿಕೊಳ್ಳುವಷ್ಟು ಮಳೆಯಾಗುತ್ತಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗಿ ಬಿತ್ತನೆ, ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.