ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಭಾಗದಲ್ಲಿ ಮುಂದಿನ 4 ದಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಮೋಚಾ ಚಂಡಮಾರುತ ರೂಪುಗೊಳ್ಳುತ್ತಿದ್ದು, ಮೇ 8 ರಂದು ಪ್ರಾರಂಭವಾಗಲಿದೆ. ಮೇ 9ರ ನಂತರ ಚಂಡಮಾರುತ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ನಂತರದಲ್ಲಿ ಮಳೆ, ಗಾಳಿ ವೇಗ ಹೆಚ್ಚಾಗಲಿದೆ.
ಬಂಗಾಳಕೊಲ್ಲಿಯ ಒಡಿಶಾ ಕರಾವಳಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಭಾಗದಲ್ಲಿ ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಮೇ 8 ರಿಂದ 12 ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಉತ್ತರ ಒಳನಾಡಿನ ರಾಯಚೂರು, ಗದಗ, ಬಾಗಲಕೋಟೆ, ಬೀದರ್, ಕಲಬುರ್ಗಿ, ಕೊಪ್ಪಳ ಜಿಲ್ಲೆಗಳ ಒಂದೆರಡು ಕಡೆ ಮಳೆಯಾಗುವ ಸಂಭವ ಇದೆ.