ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಭಾನುವಾರ ಕೂಡ ಮಳೆಯಾಗಿದೆ. ಉತ್ತರ ಒಳನಾಡಿನ ಕೆಲವು ಕಡೆ, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಳೆಗಳಲ್ಲಿ ಮಳೆಯಾಗಿದ್ದು, ಇನ್ನೂ ಮೂರು ದಿನ ರಾಜ್ಯದಲ್ಲಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶಿವಮೊಗ್ಗ ಜಿಲ್ಲೆ ಆಗುಂಬೆಯಲ್ಲಿ 8 ಸೆ.ಮೀ. ಕೊಪ್ಪಳ ಜಿಲ್ಲೆ ತಾವರೆಗೇರಾದಲ್ಲಿ 7 ಸೆ.ಮೀ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ, ಚಿಕ್ಕಮಗಳೂರು ಜಿಲ್ಲೆಯ ಜಯಪುರ, ಎನ್.ಆರ್. ಪುರದಲ್ಲಿ 4 ಸೆ.ಮೀ. ಮಳೆಯಾಗಿದೆ.
ರಾಯಚೂರು ಜಿಲ್ಲೆಯ ಮುದಗಲ್, ವಿಜಯಪುರ, ಶಿವಮೊಗ್ಗ, ಬೀದರ್, ಗದಗ, ಕಲಬುರಗಿ, ಧಾರವಾಡ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆಯಾಗಿದೆ.
ಸೋಮವಾರದಿಂದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಒಂದೆರಡು ಕಡೆ ಮಳೆಯಾಗುವ ಸಂಭವ ಇದೆ. ಏಪ್ರಿಲ್ 17 ರಿಂದ ಮೂರು ದಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್ 17ರಂದು ದಕ್ಷಿಣ ಕನ್ನಡ, ಬೀದರ್, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಸೇರಿ 22 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.