ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ರಾಜ್ಯದ ಹಲವೆಡೆ ಮಳೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ರಭಸವಾಗಿ ನೀರು ಹರಿದು ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರಿನಲ್ಲಿ ಸೋಮವಾರ ಸಂಜೆ ಶುರುವಾದ ಮಳೆ ರಾತ್ರಿಯೂ ಮುಂದುವರೆದಿದೆ. ಯಲಹಂಕ, ಮೆಜೆಸ್ಟಿಕ್, ಶ್ರೀರಾಂಪುರ ಸೇರಿದಂತೆ ಹಲವು ಕಡೆಗಳಲ್ಲಿ ಭಾರಿ ಮಳೆಯಾಗಿದೆ. ಅಂಡರ್ ಪಾಸ್ ಮತ್ತು ಪ್ರಮುಖ ಜಂಕ್ಷನ್ ಸೇರಿ ಮುಖ್ಯ ರಸ್ತೆಗಳಲ್ಲಿ ನೀರು ನಿಂತ ಕಾರಣ ಸಂಚಾರಕ್ಕೆ ತೊಂದರೆಯಾಗಿತ್ತು.
ಕಾವೇರಿ ಜಂಕ್ಷನ್ ಅಂಡರ್ ಪಾಸ್, ಶಿವಾನಂದ ರೈಲ್ವೆ ಅಂಡರ್ ಪಾಸ್, ಮಹದೇವಪುರ ಸೇಲಂ ಬ್ರಿಡ್ಜ್, ಓಕಳಿಪುರ ಅಂಡರ್ ಪಾಸ್, ಹೆಸರುಘಟ್ಟ ಕ್ರಾಸ್, ಮಾನ್ಯತಾ ಟೆಕ್ ಪಾರ್ಕ್, ಟಿನ್ ಫ್ಯಾಕ್ಟರಿ, ಹಳೆ ಏರ್ಪೋರ್ಟ್ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. ನವೆಂಬರ್ 7ರ ಮಂಗಳವಾರ ಕೂಡ ಭಾರಿ ಮಳೆ ಆಗುವ ಸಂಭವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ.
ರಾಜ್ಯದಲ್ಲಿಯೂ ಮಳೆ
ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಂಭವ ಇದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರಿ ಮಳೆ ಆಗಲಿದೆ. ಕೊಡಗು, ಚಿಕ್ಕಮಗಳೂರು ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಂಭವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ರಾಯಚೂರಿನಲ್ಲಿ ನವೆಂಬರ್ 8 ರಿಂದ 10 ರವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವ ಇದೆ.