ದೇಶದ ರೈಲು ಸಂಪರ್ಕ ಸೇವೆಗೆ ಮತ್ತಷ್ಟು ರೈಲುಗಳು ಸೇರ್ಪಡೆಯಾಗ್ತಿದ್ದು ಜೂನ್ 26 ರಿಂದ ಇನ್ನೂ ಐದು ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಸೇವೆ ಆರಂಭವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸೆಮಿ ಹೈಸ್ಪೀಡ್ ರೈಲುಗಳಾದ ವಂದೇ ಭಾರತ್ ರೈಲು ಸೇವೆ ಉದ್ಘಾಟಿಸುವ ನಿರೀಕ್ಷೆಯಿದೆ.
ಐದು ರೈಲುಗಳು ಚಲಿಸುವ ಮಾರ್ಗಗಳೆಂದರೆ, ಮುಂಬೈ-ಗೋವಾ, ಬೆಂಗಳೂರು-ಹುಬ್ಬಳ್ಳಿ, ಪಾಟ್ನಾ-ರಾಂಚಿ, ಭೋಪಾಲ್-ಇಂಧೋರ್ ಮತ್ತು ಭೋಪಾಲ್-ಜಬಲ್ಪುರ. ಒಡಿಶಾ ದುರಂತದ ನಂತರ ರೈಲ್ವೆ ಸಚಿವಾಲಯವು ಮುಂಬೈ-ಗೋವಾ ವಂದೇ ಭಾರತ್ ರೈಲಿನ ಚಾಲನೆಯನ್ನು ರದ್ದುಗೊಳಿಸಿತ್ತು.
ಒಂದೇ ದಿನದಲ್ಲಿ ಐದು ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ಆರಂಭಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಇಂತಹ ಚಾಲನೆಗಳು ಸಾಕಷ್ಟು ಸಂಭ್ರಮವನ್ನು ಕಂಡಿದ್ದರೂ, ಒಡಿಶಾ ಅಪಘಾತದ ದೃಷ್ಟಿಯಿಂದ ಇದು ತುಲನಾತ್ಮಕವಾಗಿ ಕಠಿಣ ಘಟನೆಯಾಗಿದೆ.
288 ಮಂದಿ ಪ್ರಾಣ ಕಳೆದುಕೊಳ್ಳಲು ಕಾರಣವಾದ ಒಡಿಶಾದಲ್ಲಿನ ಭೀಕರ ತ್ರಿವಳಿ ರೈಲು ಅಪಘಾತ ಪ್ರಕರಣದ ನಂತರ ಮೊದಲ ಬಾರಿಗೆ ಹೊಸ ರೈಲು ಸೇವೆ ಉದ್ಘಾಟನೆಯಾಗುತ್ತಿದೆ.