ಜೈಪುರ: ಪಾಕಿಸ್ತಾನ ಏಜೆಂಟರಿಗೆ ಭಾರತೀಯ ಸೇನೆಯ ರಹಸ್ಯ ದಾಖಲೆಗಳನ್ನು ಪೂರೈಸಿದ ಆರೋಪದ ಮೇಲೆ ಭಾರತೀಯ ಅಂಚೆ ಕಚೇರಿ ವಿಭಾಗದ ಅಧಿಕಾರಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜಸ್ಥಾನದ ಜೈಪುರದ 27 ವರ್ಷದ ಭಾರತೀಯ ರೇಲ್ವೇಯ ಅಂಚೆ ಕಚೇರಿ ವಿಭಾಗದ ಅಧಿಕಾರಿ ಭರತ್ ಬಾವರಿ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ಸೇನೆ ದಕ್ಷಿಣ ಕಮಾಂಡ್ ನ ಮಿಲಿಟರಿ ಇಂಟಲಿಜೆನ್ಸ್ ಮತ್ತು ರಾಜಸ್ಥಾನ ರಾಜ್ಯದ ಗುಪ್ತಚರ ಇಲಾಖೆ, ಪಾಕ್ ನ ಐಎಸ್ಐ ನಲ್ಲಿ ಆತನ ಹ್ಯಾಂಡ್ಲರ್ ಗಳು ಸಾಮಾಜಿಕ ಮಾಧ್ಯಮದ ಮೂಲಕ ಸಂವಹನ ನಡೆಸುತ್ತಾರೆ ಎಂದು ಹೇಳಿದ್ದಾರೆ.
ಭರತ್ ಬಾವರಿ ವಿರುದ್ಧ ಹನಿಟ್ರ್ಯಾಪ್ ನಡೆಸಲಾಗಿದೆ ಎಂದು ಹೇಳಲಾಗಿದೆ. ಜೈಪುರ ರೈಲ್ವೇ ನಿಲ್ದಾಣದ ಬಳಿ ಅಂಚೆ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಬಾವರಿ, ಕಳೆದ 6 ತಿಂಗಳಿನಿಂದ ಐಎಸ್ಐಗೆ ರಾಷ್ಟ್ರೀಯ ಪ್ರಾಮುಖ್ಯತೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಮಾರಾಟ ಮಾಡುತ್ತಿದ್ದರು.
ಮಥುರಾ – ವೃಂದಾವನದ 10 ಚದರ ಕಿ.ಮೀ ಪ್ರದೇಶದಲ್ಲಿ ಮದ್ಯ – ಮಾಂಸ ಮಾರಾಟ ನಿಷೇಧ
ವಿಚಾರಣೆ ವೇಳೆ, ಆರೋಪಿ ಬಾವರಿ ಮೂಲತಃ ಜೋಧಪುರದ ಖೇಡಪ ಗ್ರಾಮದವನೆಂದು ತಿಳಿದು ಬಂದಿದೆ. ಮೂರು ವರ್ಷಗಳ ಹಿಂದೆ ಎಂಟಿಎಸ್ ಪರೀಕ್ಷೆಯ ಅಡಿಯಲ್ಲಿ ರೈಲ್ವೇ ಪೋಸ್ಟಲ್ ಸರ್ವೀಸ್ ನ ಜೈಪುರ ಕಚೇರಿಯಲ್ಲಿ ನೇಮಕಗೊಂಡಿದ್ದ.
ಸುಮಾರು 4-5 ತಿಂಗಳ ಹಿಂದೆ, ಆರೋಪಿಯ ಫೇಸ್ ಬುಕ್ ಮೆಸೆಂಜರ್ ಗೆ ಮಹಿಳೆಯೊಬ್ಬಳು ಸಂದೇಶ ರವಾನಿಸಿದ್ದಾಳೆ. ನಂತರ ವಾಟ್ಸಾಪ್ ಚಾಟ್, ವಿಡಿಯೋ ಕರೆಗಳವರೆಗೆ ಇದು ಮುಂದುವರೆದಿದೆ. ಪಾಕಿಸ್ತಾನದ ಮಹಿಳಾ ಏಜೆಂಟ್ ಆಗಿರುವ ಈಕೆ, ಆರೋಪಿಯನ್ನು ಭೇಟಿ ಮಾಡಲು ಮತ್ತು ಆತನೊಂದಿಗೆ ಸುತ್ತಾಡಲು, ಜೊತೆಯಿರುವ ನೆಪದಲ್ಲಿ ತನ್ನ ನಕಲಿ ಫೋಟೋಗಳನ್ನು ಕಳುಹಿಸುತ್ತಿದ್ದಳು.
ಹನಿಟ್ರ್ಯಾಪ್ ಗೊಳಗಾದ ಬಾವರಿ ಬಳಿ ಸೇನಾ ಪತ್ರಗಳ ಫೋಟೋಗಳನ್ನು ಕೇಳಲಾಯಿತು. ಆರೋಪಿಯು ರಹಸ್ಯವಾಗಿ ಪೋಸ್ಟಲ್ ಪತ್ರಗಳ ಲಕೋಟೆಯನ್ನು ತೆರೆದು ಆ ಪತ್ರದ ಫೋಟೋಗಳನ್ನು ತೆಗೆದು ಕಳುಹಿಸುತ್ತಿದ್ದ. ಈ ಸಂಬಂಧ ಆರೋಪಿ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆ 1923ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.